ದಿಲ್ಲಿ ಕಾರು ದುರಂತಕ್ಕೆ ಬಲಿಯಾದ ಯುವತಿ ಅಂಜಲಿ ಕುಟುಂಬದ ಏಕೈಕ ಅನ್ನದಾತೆ

ಹೊಸದಿಲ್ಲಿ,ಡಿ.5: ಹೊಸ ವರ್ಷದಂದು ನಸುಕಿನಲ್ಲಿ ಪಾನಮತ್ತ ಯುವಕರಿದ್ದ ಕಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ 20 ವರ್ಷ ವಯಸ್ಸಿನ ಯುವತಿ ಅಂಜಲಿ ಸಿಂಗ್ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದರು. ತನ್ನ ಅನಾರೋಗ್ಯಪೀಡಿತ ತಾಯಿ ಹಾಗೂ ಐದು ಮಂದಿ ಒಡಹುಟ್ಟಿದವರು ನೆಮ್ಮದಿಯಿಂದ ಬದುಕಬೇಕೆಂದು ಆಕೆ ಬಯಸಿದ್ದರು.ಅಂಜಲಿ ತನ್ನ ಕುಟುಂಬದ ಏಕೈಕ ಅನ್ನದಾತೆಯಾಗಿದ್ದಳು. ತಾನು ಬ್ಯೂಟಿಶಿಯನ್ ಆಗಬೇಕೆಂಬ ಮತ್ತು ಸ್ವಂತದ್ದೊಂದು ಪಾರ್ಲರ್ ತೆರೆಯಬೇಕೆಂಬ ಹಂಬಲವನ್ನು ಆಕೆ ಹೊಂದಿದ್ದಳು.
ಹೊಸ ವರ್ಷದಂದು ನಸುಕಿನಲ್ಲಿ ಅಂಜಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು.ಅಪಘಾತದ ತೀವ್ರತೆಯಿಂದಾಗಿ ಕಾರಿನಡಿಯಲ್ಲಿ ಅಂಜಲಿಯ ದೇಹ ಸಿಕ್ಕಿಹಾಕಿಕೊಂಡಿತ್ತು. ಆಕೆಯನ್ನು ಕಾರು ಸುಮಾರು 12 ಕಿ.ಮೀ. ವರೆಗೆ ಎಳೆದೊಯ್ದಿತ್ತು . ಕೊನೆಗೆ ಆಕೆಯ ಮೃತದೇಹ ದಿಲ್ಲಿ ಕಾಂಜಾವಾಲಾ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಮನೆಯಲ್ಲಿ ಆರ್ಥಿಕ ಸಂಕಷ್ಟವಿದ್ದು, ಕುಟುಂಬದ ಪೋಷಣೆಗಾಗಿ ಅಂಜಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದರು. ಆದರೆ ಆಕೆಯ ಆದಾಯ ಸ್ಥಿರವಾಗಿರಲಿಲ್ಲ. ಒಮ್ಮೊಮ್ಮೆ ಆಕೆ ತನ್ನ ತಾಯಿಗೆ 500 ರೂ. ನೀಡಿದರೆ, ಇನ್ನು ಕೆಲವು ದಿನಗಳಲ್ಲಿ 2 ಸಾವಿರ ರೂ. ನೀಡುತ್ತಿದ್ದಳು ಎಂದು ಆಕೆಯ ಕುಟುಂಬಿಕರು ಹಾಗೂ ಸ್ನೇಹಿತರು ‘ದಿ ಪ್ರಿಂಟ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ದುರ್ಘಟನೆಯ ದಿನದಂದು ಅಂಜಲಿ ಹಾಗೂ ಆಕೆಯ ಸ್ನೇಹಿತೆ ನಿಧಿ ಹೊಟೇಲ್ ಒಂದರಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯ ಪರವಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರಿಗೂ ಕೆಲವು ಪುರುಷರೊಂದಿಗೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಆನಂತರ ಆಕೆ ಹೊಟೇಲ್ನಿಂದ ನಿರ್ಗಮಿಸಿದ್ದರು ಎಂದು ಆಕೆಯ ಬಂಧುಗಳು ತಿಳಿಸಿದ್ದಾರೆ.
ದುರಂತ ನಡೆದ ಹಿಂದಿನ ದಿನ, ಡಿಸೆಂಬರ್ 31ರಂದು ಅಂಜಲಿಸಿಂಗ್ ಸಂಜೆ ಆರು ಗಂಟೆ ವೇಳೆಗೆ ತನ್ನ ಮನೆಯಿಂದ ನಿರ್ಗಮಿಸಿದ್ದರು . ಮರುದಿನ ಬೆಳಗ್ಗೆ ತಾನು ಮನೆಗೆ ಹಿಂತಿರುವುದಾಗಿಯೂ ಹೊಸ ವರ್ಷವನ್ನು ಜೊತೆಯಾಗಿ ಆಚರಿಸೋಣವೆಂದು ಆಕೆ ತಾಯಿಗೆ ತಿಳಿಸಿದ್ದರು. ಆದರೆ ಮಾರನೆ ದಿನ ಪೊಲೀಸರು ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ನಾವೆಲ್ಲರೂ ಆಸ್ಪತ್ರೆಗೆ ಧಾವಿಸಿದೆವು ಎಂದು ಅಂಜಲಿಯ 14 ವರ್ಷದ ಸೋದರಿ ಅಂಶಿಕಾ ತಿಳಿಸಿದರು. ‘‘ವೋ ಖುಷ್ ಥಿ... ನಯೀ ಜಾಕೆಟ್, ನಯೀ ಶೂಸ್ ಲಿ ಥೆ ( ಆಕೆ ಸಂತಸದಿಂದಿದ್ದಳು.. ಆಕೆ ಹೊಸ ಜಾಕೆಟ್, ಹೊಸ ಶೂಗಳನ್ನು ಖರೀದಿಸಿದ್ದಳು)’’ ಎಂದು ಅಂಶಿಕಾ ತಿಳಿಸಿದ್ದಾರೆ. ಅಂಶಿಕಾಳ ಹೊರತಾಗಿ ಅಂಜಲಿಗೆ ಇನ್ನಿಬ್ಬರು ಸೋದರಿಯರಿದ್ದು (ವಿವಾಹಿತರು) ಹಾಗೂ ಇಬ್ಬರು ಸೋದರರಿದ್ದಾರೆ.
‘‘ತನ್ನ ಸೋದರರು , ಸೋದರಿಯರಿಗಾಗಿ ಅಂಜಲಿ ಹೊಸ ಬಟ್ಟೆಗಳನ್ನು ಖರೀದಿಸಿದ್ದರು. ಮನೆಯಿಂದ ಹೊರಡುವ ಮೊದಲು ಅಡುಗೆ ಮಾಡದಂತೆ ತಾಯಿಗೆ ತಿಳಿಸಿದ್ದಳು. ತಾನೇ ಊಟ ತರುವುದಾಗಿಯೂ ಜೊತೆಯಾಗಿ ಕುಳಿತು ತಿನ್ನೋಣವೆಂಬುದಾಗಿಯೂ ಆಕೆ ಹೇಳಿದ್ದಳು. ಈ ಹಿಂದೆ, ಕುಟುಂಬವು ಸರಿಯಾಗಿ ಊಟ ಮಾಡದ ದಿನಗಳೂ ಇದ್ದವು. ಆದರೆ ಅಂಜಲಿ ಕಷ್ಟಪಟ್ಟು ದುಡಿದು, ಸಂಪಾದಿಸುತ್ತಿದ್ದಳು. ಯಾರೂ ಕೂಡಾ ಹಸಿವಿನಿಂದ ಮಲಗದಂತೆ ನೋಡಿಕೊಳ್ಳಲು ಬಂಧುಗಳಿಂದಲೂ ಸಾಲ ಪಡೆದುಕೊಂಡಿದ್ದಳು ’’ಎಂದು ಆಕೆಯ 67 ವರ್ಷದ ಅಜಿ ಕಾಂತಾ ಸಿಂಗ್ ಹೇಳುತ್ತಾರೆ.
9ನೇ ತರಗತಿಯ ವರೆಗೆ ಕಲಿತಿದ್ದ ಅಂಜಲಿ, ಮನೆಯಲ್ಲಿ ಕಡುಬಡತನವಿದ್ದ ಕಾರಣ ಶಾಲೆಯನ್ನು ತೊರೆದು, ದುಡಿಮೆಗಿಳಿದಳು. ಆಕೆಗೆ ಇಂತಹ ಘೋರ ಸಾವು ಬರಬಾರದಿತ್ತು ಎಂದು ಆಕೆಯ ಚಿಕ್ಕಮ್ಮ ಶೋಕಿಸುತ್ತಾರೆ.







