ಪ್ರಧಾನಿ ಭೇಟಿಯಾದ ಮೈಕ್ರೊಸಾಫ್ಟ್ ಸಿಇಒ ಸತ್ಯಾ ನಾದೆಲ್ಲಾ

ಹೊಸದಿಲ್ಲಿ, ಜ. 5: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಮೈಕ್ರೊಸಾಫ್ಟ್ ಅಧ್ಯಕ್ಷ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತ್ಯಾ ನಾದೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಸದಿಲ್ಲಿಯಲ್ಲಿ ಗುರುವಾರ ಭೇಟಿಯಾದರು ಹಾಗೂ ಡಿಜಿಟಲ್ ಇಂಡಿಯಾ ದೃಷ್ಟಿಕೋನವನ್ನು ಸಾಕಾರಗೊಳಿಸಲು ಕಂಪೆನಿಯಿಂದ ದೇಶಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಿ ಅವರೊಂದಿಗಿನ ಭೇಟಿ ಒಳನೋಟದಿಂದ ಕೂಡಿತ್ತು ಎಂದು ನಾದೆಲ್ಲಾ ಅವರು ಹೇಳಿದ್ದಾರೆ. ಡಿಜಿಟಲ್ ರೂಪಾಂತರದ ಮೂಲಕ ಸುಸ್ಥಿರ ಹಾಗೂ ಒಳಗೊಳ್ಳುವ ಆರ್ಥಿಕ ಬೆಳವಣಿಗೆಗೆ ಸರಕಾರ ಗಮನ ಕೇಂದ್ರೀಕರಿಸಿರುವುದನ್ನು ಅವರು ಶ್ಲಾಘಿಸಿದರು. ‘‘ಡಿಜಿಟಲ್ ರೂಪಾಂತರದ ಮೂಲಕ ಸುಸ್ಥಿರ ಹಾಗೂ ಒಳಗೊಳ್ಳುವ ಆರ್ಥಿಕ ಬೆವವಣಿಗೆ ಬಗ್ಗೆ ಕೇಂದ್ರ ಸರಕಾರ ಗಮನ ಕೇಂದ್ರೀಕರಿಸಿರುವುದು ಸ್ಪೂತಿದಾಯಕವಾಗಿದೆ.
ಡಿಜಿಟಲ್ ಇಂಡಿಯಾ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತಕ್ಕೆ ನೆರವು ನೀಡಲು ಹಾಗೂ ಜಗತ್ತಿಗೆ ಬೆಳಕಾಗಲು ನಾವು ಎದುರು ನೋಡುತ್ತಿದ್ದೇವೆೆ’’ ಎಂದು ನಾದೆಲ್ಲಾ ಅವರು ಟ್ವೀಟ್ ಮಾಡಿದ್ದಾರೆ. ಭಾರತದ ವಿವಿಧ ನಗರಗಳಿಗೆ ಪ್ರವಾಸದ ಮೂರನೇ ದಿನವಾದ ಗುರುವಾರ ನಾದೆಲ್ಲಾ ಅವರು ಗ್ರಾಹಕರು, ಸ್ಟಾರ್ಟ್ ಅಪ್ಸ್, ಡೆವಲಪ್ಪರ್ಸ್, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಸರಕಾರದ ಉನ್ನತ ನಾಯಕರೊಂದಿಗೆ ಮ್ಯಾರಥಾನ್ ಸಭೆ ನಡೆಸಿದ್ದಾರೆ.
ನಾದೆಲ್ಲಾ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಬುಧವಾರ ಭೇಟಿಯಾಗಿದ್ದಾರೆ. ಈ ಸಂದರ್ಭ ಡಿಜಿಟಲ್ ಜಾಲ ತಾಣದಲ್ಲಿ ಆಡಳಿತ ಹಾಗೂ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾದೆಲ್ಲಾ ಅವರು ರಾಜ್ಯ ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಈ ಸಂದರ್ಭ ರಾಜೀವ್ ಚಂದ್ರಶೇಖರ್ ಅವರು ಭಾರತದಲ್ಲಿ ಆವಿಷ್ಕಾರ ಹಾಗೂ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಹೂಡಿಕೆ ಮಾಡುವಂತೆ ನಾಡೆಲ್ಲಾ ಅವರಿಗೆ ಆಹ್ವಾನ ನೀಡಿದ್ದಾರೆ.







