ಜಾತಿ, ಧರ್ಮಗಳ ಗಡಿ ಮೀರಿದರೆ ಮಾತ್ರ ಭಾರತ ವಿಶ್ವ ಗುರುವಾಗಲು ಸಾಧ್ಯ: ಬಸವಪ್ರಕಾಶ ಸ್ವಾಮೀಜಿ
ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಸಹಸ್ರಮಾನೋತ್ಸವ ಸಮಾರಂಭ

ಭಟ್ಕಳ: ಭಾರತ ದೇಶದಲ್ಲಿ ವೈವಿದ್ಯಮಯ ಜಾತಿ, ಧರ್ಮ, ಭಾಷೆಗಳ ಗಡಿಯನ್ನು ಮೀರಿ ಕೆಲಸ ಮಾಡಿದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಬಸವಧರ್ಮ ಪೀಠ ಕೂಡಲಸಂಗಮ ಬೆಳಗಾವಿಯ ಬಸವಪ್ರಕಾಶ ಸ್ವಾಮಿಜಿ ಹೇಳಿದರು.
ಇಲ್ಲಿನ ಜಾಮಿಯಾ ಮಸೀದಿ ಬಳಿ ಇರುವ ಮೈದಾನದಲ್ಲಿ ಭಟ್ಕಳದ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಸಹಸ್ರಮಾನೋತ್ಸವ ಸಮಾರಂಭದ ಅಂಗವಾಗಿ ಗುರುವಾರ ನಡೆದ ‘ಭಟ್ಕಳದಲ್ಲಿ ಹಿಂದೂ-ಮುಸ್ಲಿಮ್ ಧರ್ಮ ಸಮನ್ವಯತೆ’ ಎಂಬ ವಿಷಯದ ಕುರಿತು ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾನತೆ ಕುರಿತು ಮಾತನಾಡುವವರೇ ದೇಶದಲ್ಲಿ ಕೋಮುದ್ವೇಷ ಹರಡುವ ಕೆಲಸ ಮಾಡುತ್ತಿರುವುದು ವಿಪರ್ಯಾಸ. ಭಟ್ಕಳದಲ್ಲಿ ಹಿಂದೂ-ಮುಸ್ಲಿಮರು ಅನೋನ್ಯವಾಗಿದ್ದಾರೆ. ಇಸ್ಲಾಮ್ ಶಾಂತಿಯ ಧರ್ಮವಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಧರ್ಮ ದೇವರ ಹೆಸರಲ್ಲಿ ಕೋಮುದ್ವೇಷ ಹರಡುವವರ ಕುರಿತು ಎಚ್ಚರಿಕೆಯಿಂದಿರಬೇಕು. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಸಮಾಜದ ಹಿತವನ್ನು ಬಲಿಕೊಡುತ್ತಿದ್ದಾರೆ ಎಂದರು.
ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಪ್ರಧಾನ ಕಾರ್ಯದರ್ಶಿ ಮೌಲಾನ ಬಿಲಾಲ್ ಹಸನಿ ನದ್ವಿ ಮಾತನಾಡಿ, ನಾವು ಮನುಷ್ಯರು ಎಂಬ ನೆಲೆಯಲ್ಲಿ ನಮ್ಮಲ್ಲಿ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಂಡು ಬದುಕಬೇಕು. ನಮ್ಮನ್ನು ಹುಟ್ಟಿಸಿದ ದೇವನು ನಮ್ಮನ್ನು ಹಾಗೆಯೇ ಬಿಡಲಿಲ್ಲ. ನಮ್ಮ ಮಾರ್ಗದರ್ಶನಕ್ಕಾಗಿ ಹಲವಾರು ಪ್ರವಾದಿಗಳನ್ನು ಕಳುಹಿಸಿ ಅವರ ಮೂಲಕ ನಮ್ಮಲ್ಲಿ ಮನುಷ್ಯತ್ವವನ್ನು ಬೆಳೆಸಿದನು. ಹಾಗಾಗಿ ನಾವು ಮೂಲತಃ ಮಾನವರು ಎಂಬ ಪ್ರಜ್ಞೆಯೊಂದಿಗೆ ಎಲ್ಲರೊಂದಿಗೆ ಬೆರೆತು ಬದುಕುವುದನ್ನು ಕಲಿತುಕೊಳ್ಳಬೇಕು. ನಮ್ಮಲ್ಲಿ ಅಂತರವನ್ನು ಸೃಷ್ಟಿಸಲಾಗುತ್ತಿದೆ. ನಮ್ಮಲ್ಲಿರುವ ಅಪನಂಬಿಕೆ, ಅವಿಶ್ವಾಸಗಳ ಗೋಡೆಗಳನ್ನು ಕೆಡವಿ ನಾವೆಲ್ಲರೂ ಒಂದೇ ದೇವನ ಸೃಷ್ಟಿಗಳಾಗಿ ಬದುಕಬೇಕು ಎಂದು ಕರೆ ನೀಡಿದರು.
‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, "ಭಾರತ ಒಂದು ವಿಶಾಲ ಸಾಗರವಾಗಿದ್ದು ಹಲವಾರು ರಂಗಗಳಲ್ಲಿ ನಾವು ವಿಶ್ವಗುರು ಎನಿಸಿಕೊಂಡರೂ ಕೂಡ ನಾವು ಪರಸ್ಪರ ಎಷ್ಟು ಹತ್ತಿರವಾಗಿದ್ದೇವೆ ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕು. 140ಕೋಟಿ ಮನಸ್ಸುಗಳು ಹತ್ತಿರವಾಗುವುದಿಲ್ಲವೋ ಆವರೆಗೆ ನಾವು ಒಂದು ಶಕ್ತಿಯಾಗಿ ನಿಲ್ಲಲು ಸಾಧ್ಯವಿಲ್ಲ. ಹೀಗಾಗಬೇಕಾದರೆ ನಾವೆಲ್ಲರೂ ಪರಸ್ಪರ ಹತ್ತಿರವಾಗುವ ಚೇತನಗಳಾಗಬೇಕು. ನಮ್ಮನ್ನು ಒಂದುಗೂಡಿಸುವ ಸಾಮರ್ಥ್ಯ ಧರ್ಮಗಳಿಗಿದೆ. ನೈತಿಕ ಅಧಃಪತನದತ್ತ ನಾವು ಸಾಗುತ್ತಿದ್ದೇವೆ. ಇದಕ್ಕೆ ಯಾವುದೇ ಧರ್ಮ ಜಾತಿ ಎನ್ನುವುದಿಲ್ಲ. ಎಲ್ಲ ಕೆಡುಕುಗಳಿಂದ ನಾವು ಮುಕ್ತವಾದಾಗ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ" ಎಂದರು.
ಸಹಸ್ರಮಾನೋತ್ಸವ ಸಮಾರಂಭದ ಸಂಚಾಲಕ ಮೌಲಾನ ಇಲ್ಯಾಸ್ ನದ್ವಿ ಮಾತನಾಡಿ, "ಹೊಸಪೀಳಿಗೆಗೆ ನಮ್ಮ ಇತಿಹಾಸವನ್ನು ಕಲಿಸಿಕೊಡುವುದು ಅತೀ ಅವಶ್ಯಕ. ಭಟ್ಕಳದ ಜಾಮಿಯಾ ಮಸೀದಿಗೆ 1400 ವರ್ಷಗಳ ಇತಿಹಾಸವಿದೆ. ಆದರೆ ಇಲ್ಲಿನ ಜೈನ ಬಸದಿಗಳಿಗೆ 1500 ವರ್ಷಗಳ ಇತಿಹಾಸವಿದೆ. ಇಲ್ಲಿನ ಹಿಂದೂ-ಮುಸ್ಲಿಮರು, ಜೈನರು ಯಾವ ರೀತಿಯಾಗಿ ಬದುಕಿ ಬಾಳಿದರು ಎಂಬ ಇತಿಹಾಸ ನಮ್ಮ ಯುವ ಸಮುದಾಯಕ್ಕೆ ಗೊತ್ತಾಗಬೇಕಿದೆ" ಎಂದರು. ನಾನು ಜಗತ್ತಿನ ಹಲವು ಮುಸ್ಲಿಮ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ ಭಾರತದಲ್ಲಿರುವಷ್ಟು ಧಾರ್ಮಿಕ ಸ್ವಾತಂತ್ರ್ಯ ಬೇರೆ ಯಾವ ರಾಷ್ಟ್ರದಲ್ಲೂ ನನಗೆ ಕಂಡು ಬಂದಿಲ್ಲ. ದಿ.ಪೇಜಾವರ ಸ್ವಾಮಿಜಿಗಳನ್ನು ಕೋಮುವಾದಿ ಎನ್ನಲಾಗುತ್ತಿದೆ. ಆದರೆ ಅವರಷ್ಟು ಜಾತ್ಯಾತೀತ ಸ್ವಾಮೀಜಿಯನ್ನು ನಾನು ನೋಡಿಲ್ಲ. ಅವರು ಮುಸ್ಲಿಮರನ್ನು ಅತಿ ಹತ್ತಿರದಿಂದ ಕಂಡವರು, ತಮ್ಮ ಮಠದಲ್ಲಿ ಉಪವಾಸ ತೊರೆಯಲು ಅನುವು ಮಾಡಿಕೊಟ್ಟವರು. ಮುಸ್ಲಿಮ್ ಧರ್ಮ ಗುರುಗಳೊಂದಿಗೆ ಅವರ ಸಂಬಂಧ ಉತ್ತಮವಾಗಿತ್ತು ಎಂದರು.
ನಮ್ಮಲ್ಲಿನ ತಪ್ಪುಕಲ್ಪನೆಗಳಿಂದ ಹಲವು ಹಿಂದೂಗಳು ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಆದರೆ ಅವರಲ್ಲಿ ತಪ್ಪುಕಲ್ಪನೆ ದೂರವಾದಾಗ ಅವರು ಇಸ್ಲಾಂ ಮತ್ತು ಮುಸ್ಲಿಮರ ಪರವಾಗಿ ನಿಲ್ಲುತ್ತಾರೆ. ಇಂತಹ ಹಲವು ಉದಾಹರಣೆಗಳನ್ನು ನಮ್ಮ ಕಣ್ಣಮುಂದಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರ ಅಧ್ಯಕ್ಷ ಮುಹಮ್ಮದ್ ಶಫಿ ಶಾಬಂದ್ರಿ ಪಟೇಲ್ ವಹಿಸಿದ್ದರು. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನ ಖಾಲಿದ್ ಸೈಫುಲ್ಲಾಹ್ ರಹ್ಮಾನಿ ಇದ್ದರು. ಮಾಜಿ ಶಾಸಕ ಜೆ.ಡಿ.ನಾಯ್ಕ, ಮಾಂಕಾಳ್ ವೈದ್ಯ, ಕರ್ನಾಟಕ ಕೈಗಾರಿಕಾ ಕೋಶದ ಅಧ್ಯಕ್ಷ ಪ್ರದೀಪ್ ಜೆ.ಪೈ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.



















