ಶಿರಾಡಿ ಘಾಟ್ ಚತುಷ್ಪಥ ಕಾಮಗಾರಿ ಮಾರ್ಚ್ ನಲ್ಲಿ ಪ್ರಾರಂಭ: ಸಿಎಂ ಬೊಮ್ಮಾಯಿ

ಬೆಂಗಳೂರು, ಜ.06 : ಶಿರಾಡಿ ಘಾಟ್ ಚತುಷ್ಪಥ ಕಾಮಗಾರಿ ಮಾರ್ಚ್ ನಲ್ಲಿ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಗುರುವಾರ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ಅಧ್ಯಕ್ಷತೆಯಲ್ಲಿ ಇಂದು ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ನಡೆಸಿದ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
''ಎಲ್ಲ ಯೋಜನೆಗಳಲ್ಲಿ ಮರಳು, ಜಲ್ಲಿ ಮತ್ತಿತರ ಸಾಮಗ್ರಿಗಳ ಮೇಲಿನ ರಾಯಲ್ಟಿ ವಿನಾಯಿತಿ ಹಾಗೂ ಜಿ.ಎಸ್.ಟಿ. ರಿಯಾಯಿತಿ ನೀಡುವುದರ ಜೊತೆಗೆ ಭೂಸ್ವಾಧೀನ ವೆಚ್ಚ ರಾಜ್ಯ ಸರ್ಕಾರ ಭರಿಸುವುದರಿಂದ ವಿನಾಯಿತಿ ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಶಿರಾಡಿ ಘಾಟ್ ಚತುಷ್ಪಥ ಕಾಮಗಾರಿ ಟೆಂಡರ್ ಮಾಡಲಾಗಿದೆ. ಮಾರ್ಚ್ ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ' ಎಂದು ತಿಳಿಸಿದರು.
''10 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಸುರಂಗ ಮಾರ್ಗ ಯೋಜನೆಯ ವಿನ್ಯಾಸ ಸಿದ್ಧಪಡಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು
''ವಿವಿಧ ನಗರ ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಮತ್ತು ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ 1,000 ಕೋಟಿ ರೂ. ಒದಗಿಸಲು ಕೇಂದ್ರ ಸಚಿವರು ಸಮ್ಮತಿಸಿದ್ದು, ಒಂದು ವಾರದೊಳಗೆ ಪ್ರಸ್ತಾವನೆ ಸಲ್ಲಿಸಲಾಗುವುದು'' ಎಂದು ಹೇಳಿದರು.
ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ : ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯನ್ನು ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ನಲ್ಲಿ ಉದ್ಘಾಟಿಸಲಾಗುವುದು. ಎಸ್ ಟಿ ಆರ್ ಆರ್ ಅನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹೊರ ವಲಯದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ..ಬೆಂಗಳೂರು ನಗರ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಗರ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ಸೂಚಿಸಿರುವುದಾಗಿ ತಿಳಿಸಿದರು.
ಮೆಟ್ರೋ ಪ್ರಯಾಣಿಕರಿಗೆ ಕೊನೆಹಂತದ ಸಂಪರ್ಕ : ಬೆಂಗಳೂರು ನಗರದಲ್ಲಿ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರಿಗೆ ಕೊನೆ ಹಂತದ ಸಂಪರ್ಕ ಒದಗಿಸುವ ಕುರಿತು ತಜ್ಞರಿಂದ ಅಧ್ಯಯನ ಮಾಡಿಸುವ ಕುರಿತು ಚರ್ಚಿಸಲಾಗಿದೆ. ರಾಯಚೂರು, ಕೊಪ್ಪಳ, ಯಾದಗಿರಿ, ಶಿವಮೊಗ್ಗ ವರ್ತುಲ ರಸ್ತೆಗಳನ್ನು ಈ ವರ್ಷದಲ್ಲಿಯೇ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಹೊಸಪೇಟೆ – ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ :
ಹೊಸಪೇಟೆ – ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನೆನೆಗುದಿಗೆ ಬಿದ್ದಿದ್ದು, ಮರು ಟೆಂಡರ್ ಮಾಡಲಾಗಿದ್ದು, ಫೆಬ್ರುವರಿಯಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.
ವಿವಿಧ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕೂಡಲೇ ಕೈಗೆತ್ತಿಕೊಳ್ಳಲು ಸೂಚಿಸಿದರು.ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಸಹಕಾರ ನೀಡುವುದಾಗಿ ತಿಳಿಸಲಾಗಿದೆ.
ಯಶವಂತಪುರ ಎಲಿವೇಟೆಡ್ ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಣೆಗೆ ವಿನ್ಯಾಸ ಪಡೆದು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಚಿವರು ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ @nitin_gadkari ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪರಿಶೀಲನಾ ಸಭೆಯ ಮುಖ್ಯಾಂಶಗಳು.@BSBommai pic.twitter.com/wjIdSmyV8Y
— CM of Karnataka (@CMofKarnataka) January 6, 2023









