ಟೇಲರ್ ಸ್ವಿಫ್ಟ್‌ರ 'ಒಲಿವಿಯಾ ಬೆನ್ಸನ್' ಬೆಕ್ಕು ವಿಶ್ವದ ಮೂರನೆ ದುಬಾರಿ ಸಾಕುಪ್ರಾಣಿ; ಅದರ ಬೆಲೆಯೆಷ್ಟು ಗೊತ್ತೆ?!

ಹೊಸದಿಲ್ಲಿ: ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ ವಿಜೇತ ಗಾಯಕಿ ಟೇಲರ್ ಸ್ವಿಫ್ಟ್ ವಿಶ್ವದಲ್ಲಿನ ಅತ್ಯಂತ ಯಶಸ್ವಿ ಮಹಿಳೆಯರ ಪೈಕಿ ಒಬ್ಬರು. ಅವರಂತೆಯೆ, ಅವರ ಸ್ಕಾಟಿಷ್ ಫೋಲ್ಡ್ ಫೆಲೈನ್ ಬೆಕ್ಕು 'ಒಲಿವಿಯಾ ಬೆನ್ಸನ್' ಕೂಡಾ ವಿಶ್ವದ ಅತ್ಯಂತ ಶ್ರೀಮಂತ ಸಾಕುಪ್ರಾಣಿಗಳ ಪೈಕಿ ಒಂದಾಗಿ ಹೊರಹೊಮ್ಮಿದೆ. AllAboutCats.com ಪ್ರಕಟಿಸಿರುವ ಪಟ್ಟಿ ಪ್ರಕಾರ, ವಿಶ್ವದ ಶ್ರೀಮಂತ ಸಾಕುಪ್ರಾಣಿಗಳ ಪೈಕಿ ಒಲಿವಿಯಾ ಬೆನ್ಸನ್ ಸದ್ಯ ಮೂರನೆ ಸ್ಥಾನ ಗಿಟ್ಟಿಸಿದೆ ಎಂದು hindustantimes.com ವರದಿ ಮಾಡಿದೆ.
2014ರಿಂದ ಟೇಲರ್ ಸ್ವಿಫ್ಟ್ ಅವರು ಒಲಿವಿಯಾ ಬೆನ್ಸನ್ ಬೆಕ್ಕು ಹೊಂದಿದ್ದು, ಅದಲ್ಲದೆ ಮೆರಿಡಿತ್ ಗ್ರೇ ಮತ್ತು ಬೆಂಜಮಿನ್ ಬಟನ್ ಎಂಬ ಮತ್ತೆರಡು ಬೆಕ್ಕುಗಳನ್ನೂ ಸಾಕಿಕೊಂಡಿದ್ದಾರೆ. ಆದರೆ, ಪಟ್ಟಿಯು ಒಲಿವಿಯಾ ಬೆನ್ಸನ್ ಬೆಕ್ಕಿನ ಕುರಿತು ಮಾತ್ರ ಉಲ್ಲೇಖಿಸಿದ್ದು, ಮೆರಿಡಿತ್ ಗ್ರೇ ಮತ್ತು ಬೆಂಜಮಿನ್ ಬಟನ್ ಕುರಿತು ಏನನ್ನೂ ಹೇಳಿಲ್ಲ.
ಫೋರ್ಬ್ಸ್ ಮಾದರಿಯ ಈ ಪಟ್ಟಿಯು ವಿಶ್ವದಾದ್ಯಂತ ಇರುವ ಜನಪ್ರಿಯ ಸಾಕುಪ್ರಾಣಿಗಳ ನಿವ್ವಳ ಬೆಲೆಯನ್ನು ಅವುಗಳ ಇನ್ಸ್ಟಾಗ್ರಾಮ್ ದತ್ತಾಂಶ ಆಧರಿಸಿ ಅಂದಾಜಿಸಲು "how much each of these pets could make" ಎಂಬ ಮೌಲ್ಯಮಾಪನ ನಡೆಸುತ್ತದೆ.
ಆದರೆ, ಒಲಿವಿಯಾ ಬೆನ್ಸನ್ ಬೆಕ್ಕಿನ ಯಾವುದೇ ಇನ್ಸ್ಟಾಗ್ರಾಮ್ ಖಾತೆ ಇಲ್ಲದೆ ಇರುವುದರಿಂದ, ಗಾಯಕಿ ಟೇಲರ್ ಸ್ವಿಫ್ಟ್‌ರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದರ ಭಾವಚಿತ್ರಗಳು ಮತ್ತು ವಿಡಿಯೊಗಳು ಕಂಡು ಬರುತ್ತಿದ್ದವು. ಅಂತರ್ಜಾಲ ತಾಣದ ಪ್ರಕಾರ, ಗಾಯಕಿ ಟೇಲರ್ ಅವರ ಬೆಕ್ಕಿನ ಮೌಲ್ಯವು 97 ದಶಲಕ್ಷ ಡಾಲರ್ (ರೂ. 800 ಕೋಟಿ) ಎಂದು ಅಂದಾಜಿಸಲಾಗಿದೆ.
ಒಲಿವಿಯಾ ಬೆನ್ಸನ್ ಗಾಯಕಿ ಟೇಲರ್ ಸ್ವಿಫ್ಟ್‌ರೊಂದಿಗೆ ಹಲವಾರು ವಾಣಿಜ್ಯಾತ್ಮಕ ಕೆಲಸಗಳಲ್ಲಿ ಕಾಣಿಸಿಕೊಂಡಿದ್ದು, ಅವರ 'Blank Space' ಸೇರಿದಂತೆ ಹಲವಾರು ಸಂಗೀತದ ಆಲ್ಬಂಗಳಲ್ಲಿ ನಟಿಸಿದೆ. ಒಲಿವಿಯಾ ಬೆನ್ಸನ್ ಹಾಗೂ ಟೇಲರ್ ಸ್ವಿಫ್ಟ್ ಇಬ್ಬರೂ ಜೊತೆಗೂಡಿ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು, ಒಲಿವಿಯಾ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಒಲಿವಿಯಾ ಬೆನ್ಸನ್, ತನಗಾಗಿಯೇ ಮೀಸಲಿರುವ ಹಲವಾರು ಅಭಿಮಾನಿ ಬಳಗಗಳನ್ನು ಹೊಂದಿದೆ.
ಅಂದಹಾಗೆ, 2022ರ ಫೋರ್ಬ್ಸ್ ವರದಿಯ ಪ್ರಕಾರ, ಗಾಯಕಿ ಟೇಲರ್ ಸ್ವಿಫ್ಟ್ ಅವರು 570 ದಶಲಕ್ಷ ಡಾಲರ್ (ರೂ. 4700 ಕೋಟಿ) ಮೌಲ್ಯದ ಸಂಪತ್ತು ಹೊಂದಿದ್ದಾರೆ.







