ಕುದ್ರೋಳಿ: ಬಿಲ್ಲವ ಈಡಿಗ, ನಾಮಧಾರಿ ಸಮುದಾಯದ 'ಐತಿಹಾಸಿಕ ಪಾದಯಾತ್ರೆ'ಗೆ ಚಾಲನೆ

ಮಂಗಳೂರು, ಜ.6: ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ.ಪ್ರಣವಾನಂದ ಸ್ವಾಮೀಜಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ 'ಐತಿಹಾಸಿಕ ಪಾದಯಾತ್ರೆ'ಗೆ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿಂದು ಚಾಲನೆ ನೀಡಲಾಗಿದೆ.
ಕುದ್ರೋಳಿ ಕ್ಷೇತ್ರದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ನಡೆಯುವ ಈ 41 ದಿನಗಳ 658 ಕಿ.ಮೀ. ಹಾದಿಯ ಪಾದಯಾತ್ರೆಗೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿತ್ರಕ್ಕೆ ಹೂ ಹಾರ ಹಾಕಿ ದೀಪ ಬೆಳಗಿಸಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೆಲಂಗಾಣದ ಅಬಕಾರಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಶ್ರೀನಿವಾಸ ಗೌಡ್ ಮಾತನಾಡಿ, ಸರಕಾರ ಬಿಲ್ಲವರ ಕುಲ ಕಸುಬಾದ ನೀರಾ ಉತ್ಪಾದನೆಗೆ, ಉತ್ಪಾದಕರಿಗೆ ಸರಕಾರ ಸಹಕಾರ ನೀಡಬೇಕು. ಬಿಲ್ಲವರಿಗಾಗಿ ಜಿಲ್ಲೆಗಳಲ್ಲಿ, ರಾಜ್ಯದ ಕೇಂದ್ರ ಸ್ಥಾನಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಅಂಬಾನಿ, ಅದಾನಿಗಳಿಗಾಗಿ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀಕರಣಗೊಳಿಸಿದೆ. ಆದರೆ ಬಿಲ್ಲವ ಸಮುದಾಯದ ಕುಲ ಕಸುಬಾದ ಶೇಂದಿ ಮಾರಾಟಕ್ಕೆ ಪ್ರೋತ್ಸಾಹ ನೀಡದಿರುವುದು ಖೇದಕರ. ತೆಲಂಗಾಣದಲ್ಲಿ ಸರಕಾರ ನೀರಾ ನೀತಿ ರೂಪಿಸಿ ಗೌಡ್ ಜನಾಂಗದವರಿಗೆ ಸೌಲಭ್ಯ ನೀಡಿದೆ. ಕರ್ನಾಟಕ ಸರಕಾರವೂ ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದರು.
ಒಂದು ಬೇಡಿಕೆ ಕಡೆಗಣಿಸಿದರೂ ಹೋರಾಟ ನಿಲ್ಲದು: ಪ್ರಣವಾನಂದ ಸ್ವಾಮೀಜಿ
ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಇದು ಸಮುದಾಯದ ಹಿತಕ್ಕಾಗಿ, ಹತ್ತು ಅವಶ್ಯಕ ಬೇಡಿಕೆಗಳ ಈಡೇರಿಕೆಗಾಗಿ ನಡೆಯುವ ಹೋರಾಟ. ನಮ್ಮ ಬೇಡಿಕೆಗಳಲ್ಲಿ ಯಾವುದೇ ಒಂದನ್ನು ಸರಕಾರ ಪರಿಗಣಿಸದೆ ಇದ್ದರೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.
ಸರಕಾರ ಈಗ ಆರಂಭಿಸಲುದ್ದೇಶಿಸಿರುವ ನಿಗಮದ ವಿವರ ನೀಡಿಲ್ಲ. ಈ ಹಿಂದೆ ಇದೇ ಸರಕಾರ ನಮ್ಮ ಸಮುದಾಯಕ್ಕೆ ಕೋಶ ಮಾಡಿ ನಮಗೆ ಮೋಸ ಮಾಡಿದೆ. ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಸ್ತ ಸಮುದಾಯದ ಹಿತಾಸಕ್ತಿಯ ವಿರುದ್ಧವಾಗಿ ಸರಕಾರದ ನಿಗಮ ಕಾರ್ಯ ನಿರ್ವಹಿಸಿದರೆ ಆ ನಿಗಮವನ್ನು ಬಂದ್ ಮಾಡಲು ಹೋರಾಟ ನಡೆಯಲಿದೆ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಕ್ಕಾಗಿ 21 ಬಿಲ್ಲವರ ಹತ್ಯೆಯಾಗಿದೆ. ಈ ರೀತಿ ನಮ್ಮ ಸಮುದಾಯ ದವರು ಬಲಿಯಾಗಬಾರದು. ನಮ್ಮ ಹೋರಾ ಟ ಸಮುದಾಯದ ಹಿತಾಸಕ್ತಿ ಗಳ ರಕ್ಷಣೆ ಗಾಗಿ ಎಂದು ಪುನರುಚ್ಚರಿಸಿದರು.
ಚಲನಚಿತ್ರ ನಟ ಸುಮನ್ ತಳ್ವಾರ್ ಭಾಗವಹಿಸಿ ಪಾದಯಾತ್ರೆಗೆ ಬೆಂಬಲ ನೀಡಿ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಶ್ರೀ ವಿಶುದಾನಂದಾ, ಶ್ರೀ ಸಂಗಮಾನಂದ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ದೊಡ್ಡಬಳ್ಳಾಪುರ ಶ್ರೀ ದೇಸಿ ಕೇಂದ್ರದ ಶ್ರೀ ನಿಶ್ಚಲ ನಿರಂಜನ ಸ್ವಾಮೀಜಿ, ಸಿಗಂದೂರು ಮಠದ ಧರ್ಮದರ್ಶಿ ರಾಮಪ್ಪ ಅಜ್ಜ, ಶಾಸಕ ಹರೀಶ್ ಕುಮಾರ್, ಬಿಲ್ಲವ ಮುಖಂಡರಾದ ರಾಜಶೇಖರ ಕೋಟ್ಯಾನ್, ನಿತಿನ್ ಗುತ್ತಿಗೆ ದಾರ, ಬಾಲರಾಜ್ ಗುತ್ತಿಗೆದಾರ, ಎಚ್.ಆರ್.ಶ್ರೀನಾಥ್ ,ಅರ್ಚನಾ ಜೈಸ್ವಾಲ್, ಎಚ್.ಎಸ್.ಸಾಯಿರಾಮ್ , ಪದ್ಮರಾಜ್, ಪುರುಷೋತ್ತಮ ಚಿತ್ರಾಪುರ, ವಿಶುಕುಮಾರ್, ಅನಿಲ್ ಕುಮಾರ್, ಸತ್ಯಜಿತ್ ಸುರತ್ಕಲ್, ಪೀತಾಂಬರ ಹೇರಾಜೆ, ಮಂಜೇ ಗೌಡ, ಪಾದಯಾತ್ರೆ ಸಮಿತಿಯ ಅಧ್ಯಕ್ಷ ಜಿತೇಂದ್ರ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಸನಿಲ್, ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಪ್ರೇಮನಾಥ್, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸತೀಶ್ ಕೆದಿಂಜ, ಬೆಳ್ತಂಗಡಿ ತಾಲೂಕು ಪಾದಯಾತ್ರೆ ಸಮಿತಿಯ ಅಧ್ಯಕ್ಷ ಚಿದಾನಂದ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
ಮಂಗಳೂರಿನಿಂದ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲಪುವ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಭಾಗವಹಿಸಲಿದ್ದಾರೆ.
ಮೊದಲ ದಿನ ಕುಳಾಯಿಯಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಬೆಳಗ್ಗೆ ಕುಳಾಯಿಯಿಂದ ಆರಂಭಗೊಳ್ಳುವ ಪಾದಯಾತ್ರೆ ಸಂಜೆ ಹೆಜಮಾಡಿ ತಲುಪಲಿದೆ.
ಪ್ರಮುಖ 10 ಬೇಡಿಕೆಗಳು:
-1)ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ. ಮೀಸಲಿಡಬೇಕು,
2) ರಾಜ್ಯಾದ್ಯಂತ ಕುಲಕಸುಬು ಶೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕು.
3) ಈಡಿಗೆ ಸಮುದಾಯದ ನೇತೃತ್ವದಲ್ಲಿ ನಡೆಯುವ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಮೇಲೆ ಸರಕಾರದ ಹಸ್ತಕ್ಷೇಪ ನಿಲ್ಲಿಸಬೇಕು.
4) ಮಂಗಳೂರು, ಉಡುಪಿ, ಶಿವಮೊಗ್ಗ, ಹಲವಾರ ಜಿಲ್ಲೆಗಳಲ್ಲಿ ಸಮಾಜಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು.
5) ರಾಜ್ಯದ ರಾಜಧಾನಿಯಲ್ಲಿ ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಸ್ಥಾಪನೆ.
6) 2ಎ ವರ್ಗದಲ್ಲಿರುವ ನಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ಮೀಸಲಾತಿ ಹೆಚ್ಚಿಸುವುದು
7) 12ನೇ ಶತಮಾನದ ಆನುಭವ ಮಂಟಪದಲ್ಲಿ ಈಡಿಗ ಸಮುದಾಯದ ಶರಣರಾಗಿದ್ದ ಶ್ರೀ ಶರಣ ಧುರಣ ಹೆಂಡದ ಮಾರಯ್ಯನ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಬೇಕು.
8)ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಮಾಡಬೇಕು.
9) ಸರಕಾರಿ ಗೋಮಾಳ ಹುಲ್ಲುಗಾವಲು ಜಮೀನಿನಲ್ಲಿ ಸರ್ಕಾರಿ ವೆಚ್ಚದಲ್ಲಿ ಈಚಲು ಮರ, ತೆಂಗಿನ ಮರ, ತಾಳೆ ಮರಗಳನ್ನು ನೆಡಬೇಕು.
10) .ಮೂರ್ತದಾರರಿಗೆ (ಶೇಂದಿ ಇಳಿಸುವವರಿಗೆ) ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು ಹಾಗೂ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಬೇಕು.