ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಹುಸಿಬಾಂಬ್ ಬೆದರಿಕೆ ಕರೆ: ಆರೋಪಿ ಸುನೀಲ್ ಬಂಧನ

ಬೆಂಗಳೂರು, ಜ.6: ಮೂರು ದಿನಗಳ ಹಿಂದೆ ಸಿಟಿ ಸಿವಿಲ್ ಕೋರ್ಟ್ (City civil court) ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿಯ ನಿವಾಸಿ ಸುನೀಲ್ ಬಂಧಿತ ಆರೋಪಿ. ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.3ರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್ 112 ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿಯೋರ್ವ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದನು. ಪೊಲೀಸರು ತಕ್ಷಣ ಬಾಂಬ್ ಪತ್ತೆದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ಕೈಗೊಂಡಿದ್ದರು. ಎಲ್ಲೆಡೆ ಹುಡುಕಾಡಿದಾಗ ಬಾಂಬ್ ಪತ್ತೆಯಾಗಿರಲಿಲ್ಲ. ಕೊನೆಗೆ ಇದೊಂದು ಹುಸಿಕರೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು ಆರೋಪಿಯ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಬಂಧಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಕಾಡುಗೋಡಿಯಲ್ಲಿ ನಡೆದಿದ್ದ ಅಪರಾಧ ಪ್ರಕರಣವೊಂದರಲ್ಲಿ ಸುನೀಲ್ ಆರೋಪಿಯಾಗಿದ್ದು ಬಂಧನಕ್ಕೊಳಗಾಗಿದ್ದನು. ವಿಚಾರಣೆಯ ಸಲುವಾಗಿ ಈತ ಕೋರ್ಟ್‌ಗೆ ಹಾಜರಾಗಬೇಕಾಗಿತ್ತು. ಈತ ಕೋರ್ಟ್‌ಗೆ ಹಲವು ಬಾರಿ ಓಡಾಡಿ ಬೇಸತ್ತಿದ್ದನಂತೆ. ಹೀಗಾಗಿ ದುಷ್ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.







