ಗ್ರಾಪಂ ಅಧ್ಯಕ್ಷನಿಂದ ಮಹಿಳಾ ಸದಸ್ಯೆ ಮೇಲೆ ದೌರ್ಜನ್ಯ ಆರೋಪ: ಪಂಜಿಕಲ್ಲಿನಲ್ಲಿ ಕಾಂಗ್ರೆಸ್ ಧರಣಿ

ಬಂಟ್ವಾಳ, ಜ.6: ಪಂಜಿಕಲ್ಲು ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಮಹಿಳಾ ಸದಸ್ಯೆಯೊಬ್ಬರ ಮೇಲೆ ಗ್ರಾಪಂ ಅಧ್ಯಕ್ಷ ಸಂಜೀವ ಪೂಜಾರಿ ದೌರ್ಜನ್ಯ ಎಸಗಿಸಿದ್ದಾರೆ ಎಂದು ಆರೋಪಿಸಿ, ಪೊಲೀಸ್ ಇಲಾಖೆ ಗ್ರಾಪಂ ಅಧ್ಯಕ್ಷರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಂಜಿಕಲ್ಲು ಗ್ರಾಪಂ ಮುಂಭಾಗದಲ್ಲಿ ಪಂಜಿಕಲ್ಲು ವಲಯ ಕಾಂಗ್ರೆಸ್ ಹಾಗೂ ಗ್ರಾಮಸ್ಥರು ಧರಣಿ ನಡೆಸಿದರು.
ಪಂಜಿಕಲ್ಲು ಗ್ರಾಮದಲ್ಲಿ ಡಾಮರೀಕರಣ ಘಟಕ ನಿರ್ಮಾಣವಾಗುತ್ತಿದ್ದು, ಗ್ರಾಮದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಘಟಕ ನಿರ್ಮಾಣವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಗ್ರಾಪಂ ಮಹಿಳಾ ಸದಸ್ಯೆ ಮಾಲತಿ ಭಾಗವಹಿಸಿದ್ದರು. ಇದೇ ವಿಚಾರವಾಗಿ ಮಾಲತಿಯವರನ್ನು ನಿಂದಿಸಿದ್ದಲ್ಲದೆ, ಸಭೆಯಿಂದ ಹೊರ ನಡೆಯುವಂತೆ ಗ್ರಾಪಂ ಅಧ್ಯಕ್ಷ ತಾಕೀತು ಮಾಡಿದ್ದರೆನ್ನಲಾಗಿದೆ. ಇದನ್ನು ಖಂಡಿಸಿ ತಾಪಂ ಅಧ್ಯಕ್ಷ ಸುದರ್ಶನ್ ಜೈನ್ ಮುಂದಾಳತ್ವದಲ್ಲಿ ಧರಣಿ ನಡೆಯಿತು.
ಈ ಸಂದರ್ಭ ಮಾತನಾಡಿದ ಸುದರ್ಶನ್ ಜೈನ್, ಭ್ರಷ್ಟಾಚಾರದಲ್ಲಿ ಮುಳುಗಿರುವ ಗ್ರಾಪಂ ಅಧ್ಯಕ್ಷ ಡಾಮರೀಕರಣ ಘಟಕ ನಿರ್ಮಾಣದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಪಂ ಸದಸ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದ್ದರಿಂದ ಅಧ್ಯಕ್ಷರ ವಿರುದ್ಧ ಪೋಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಡಾಮರೀಕರಣ ಘಟಕ ನಿರ್ಮಾಣಕ್ಕೆ ಗ್ರಾಪಂ ಲಕ್ಷಾಂತರ ರೂ. ಪಡೆದು ಕೆಲ ಸಮಯದ ಹಿಂದಯೇ ಅನುಮತಿ ನೀಡಿದೆ ಎಂದವರು ಆರೋಪಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಪಂಜಿಕಲ್ಲು ಗ್ರಾಪಂ ಅಧ್ಯಕ್ಷ ಸಂಜೀವ ಪೂಜಾರಿ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ ಅವರು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಮುಖರಾದ ದೇವಪ್ಪ ಕುಲಾಲ್, ಪದ್ಮಾವತಿ ಬಿ. ಪೂಜಾರಿ, ವಸಂತ ಸೊರ್ನಾಡು, ದಯಾನಂದ ಗೌಡ, ಸದಾನಂದ ಶೆಟ್ಟಿ, ದಿನೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಸುರೇಶ್ ಜೋರ, ರವಿ ಆರ್ ಪೂಜಾರಿ, ರಾಜೇಶ್ ಗೌಡ, ವಿಕ್ಟರ್ ಪಾಯಸ್, ಕೃಷ್ಣರಾಜ್ ಜೈನ್, ಕೃಷ್ಣಪ್ಪ ಕುಲಾಲ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







