ʼಬಾಯ್ಕಾಟ್ ಬಾಲಿವುಡ್ʼ ಟ್ರೆಂಡ್ ನಿಲ್ಲಿಸಲು ಸಹಾಯ ಮಾಡಿ: ಉ.ಪ್ರ. ಸಿಎಂಗೆ ಮನವಿ ಮಾಡಿದ ಸುನೀಲ್ ಶೆಟ್ಟಿ

ಮುಂಬೈ: ಹಿಂದಿ ಚಿತ್ರರಂಗದ ವಿರುದ್ಧ ಇರುವ ದ್ವೇಷವನ್ನು ಅಳಿಸಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ʼಬಾಯ್ಕಾಟ್ ಬಾಲಿವುಡ್ʼ ಟ್ರೆಂಡ್ ಅನ್ನು ನಿಲ್ಲಿಸಲು ಸಹಾಯ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಟ ಸುನೀಲ್ ಶೆಟ್ಟಿ ಆಗ್ರಹಿಸಿದ್ದಾರೆ.
ನೊಯ್ಡಾ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ತಮ್ಮ ಎರಡು ದಿನಗಳ ಮುಂಬೈ ಭೇಟಿಯ ವೇಳೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಸುಭಾಷ್ ಘಾಯ್, ಜ್ಯಾಕಿ ಶ್ರಾಫ್, ರಾಜಕುಮಾರ್ ಸಂತೋಷಿ, ಮನಮೋಹನ್ ಶೆಟ್ಟಿ ಮತ್ತು ಬೋನಿ ಕಪೂರ್ ಅವರನ್ನು ಭೇಟಿಯಾಗಿದ್ದರು.
ಈ ಸಂದರ್ಭ ಆದಿತ್ಯನಾಥ್ ಅವರಿಗೆ ಸುನೀಲ್ ಶೆಟ್ಟಿ ಮನವಿಯೊಂದನ್ನು ಮಾಡಿದರು. "ಬಾಯ್ಕಾಟ್ ಬಾಲಿವುಡ್ ಎಂಬ ಹ್ಯಾಶ್‌ಟ್ಯಾಗ್ ಬಗ್ಗೆ ನಿಮ್ಮ ಜೊತೆ ಮಾತನಾಡಬೇಕು. ನೀವು ಅದರ ಬಗ್ಗೆ ಏನಾದರೂ ಹೇಳಿದರೆ ಅದು ನಿಲ್ಲಬಹುದು. ನಾವು ಒಳ್ಳೆ ಕೆಲಸ ಮಾಡುತ್ತಿದ್ದೇವೆ,"ಎಂದು ಹೇಳಿದರು.
"ಬಾಲಿವುಡ್‌ಗೆ ಅಂಟಿಕೊಂಡಿರುವ ಈ ಕಳಂಕ ನೋಡಿದಾಗ ನೋವಾಗುತ್ತದೆ. ಇಲ್ಲಿರುವ ಶೇ 99ರಷ್ಟು ಮಂದಿ ಒಳ್ಳೆಯವರು. ದಯವಿಟ್ಟು ಯೋಗೀಜಿ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟು ಪ್ರಧಾನಿ ಜೊತೆ ಮಾತನಾಡಿ," ಎಂದು ಸುನೀಲ್ ಶೆಟ್ಟಿ ಮನವಿ ಮಾಡಿದರು.
"ನಾವು ಕೈಜೋಡಿಸಬೇಕು ಮತ್ತು ಈ ಉದ್ಯಮದ ಜನರು ಒಳ್ಳೆಯವರೆಂದು ಜನರಿಗೆ ತಿಳಿ ಹೇಳಬೇಕು. ನಾವೇನು ಡ್ರಗ್ಸ್ ಜೊತೆ ನಂಟು ಹೊಂದಿಲ್ಲ, ಇತರರಿಗೆ ತೊಂದರೆಯುಂಟು ಮಾಡುವುದಿಲ್ಲ. ಭಾರತವನ್ನು ಜಗತ್ತಿನೊಂದಿಗೆ ಜೋಡಿಸಲು ಈ ಉದ್ಯಮ ಶ್ರಮ ಪಟ್ಟಿದೆ. ನೀವು ದೊಡ್ಡ ಹೆಸರು ಸರ್., ನೀವು ಮಾತನಾಡಿದರೆ ಜನರು ಕೇಳುತ್ತಾರೆ," ಎಂದು ಶೆಟ್ಟಿ ಹೇಳಿದರು.
ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ದಿಂದ ಹಿಡಿದು ಶಾರುಖ್ ಅವರ ಪಠಾಣ್ ಚಿತ್ರ ಸಹಿತ ಹಲವು ಚಲನಚಿತ್ರಗಳನ್ನು ಬಾಧಿಸಿದೆ.







