ಪುತ್ತೂರು: ಅಪ್ರಾಪ್ತೆ, ಯುವತಿಗೆ ಲೈಂಗಿಕ ಕಿರುಕುಳ; ಯುವಕನ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲು
ಪುತ್ತೂರು: ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಮತ್ತು ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಯುವತಿಗೆ ಕಿರುಕುಳ ನೀಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಬೆದರಿಕೆಯ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಭುಜಂಗ ರೈ ಅವರ ಪುತ್ರ ನಿತೀಶ್ ರೈ ಎಂಬಾತನೇ ಪ್ರಕರಣದ ಆರೋಪಿ.
ನಿತಿನ್ ರೈ ಎಂಬಾತ 2020 ರ ಜನವರಿ ತಿಂಗಳಲ್ಲಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಬಾಲಕಿಯೊಬ್ಬಳನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪದೇ ಪದೇ ಆಕೆಗೆ ಮೊಬೈಲ್‍ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೆ, ನಿನ್ನ ಕುರಿತು ಅಪಪ್ರಚಾರ ಮಾಡುತ್ತೇನೆ ಎಂದು ಬ್ಲಾಕ್‍ಮೇಲ್ ಮಾಡಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಕಿರುಕುಳ ನೀಡಿದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಇದೀಗ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ತಡವಾಗಿ ದೂರು ನೀಡಿದ್ದಾರೆ. ಪೊಲೀಸರು ಆಕೆಯ ದೂರಿನಂತೆ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರೊಂದಿಗೆ ಆರೋಪಿ ನಿತೀಶ್ ರೈ ವಿರುದ್ಧ ಯುವತಿಯೊಬ್ಬರಿಂದ ಮತ್ತೊಂದು ಬೆದರಿಕೆ ಪ್ರಕರಣವೂ ದಾಖಲಾಗಿದೆ. ಪುತ್ತೂರಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯ ಮೊಬೈಲ್‍ಗೆ ಕರೆ ಮಾಡಿ ಪದೇ ಪದೇ ಪ್ರೀತಿಸುವಂತೆ ಒತ್ತಾಯ ಮಾಡುತ್ತಿರುವುದಲ್ಲದೆ, ಕಳೆದ ಡಿ.29ರಂದು ವಿದ್ಯಾರ್ಥಿನಿಯ ಮನೆಯ ಬಳಿಗೆ ಬಂದು ಬೆದರಿಕೆಯೊಡ್ಡಿರುವ ಕುರಿತು ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸರು ಆರೋಪಿಯ ವಿರುದ್ಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇನ್ನೊಬ್ಬನ ಯುವಕನ ವಿರುದ್ದವೂ ಕೇಸು
ನಿತೇಶ್ ರೈ ವಿರುದ್ದ ದೂರು ನೀಡಿರುವವರ ಪೈಕಿ, ಪ್ರಕರಣದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಮತ್ತೊಬ್ಬ ಯುವಕನ ವಿರುದ್ದವೂ ದೂರು ನೀಡಿದ್ದಾರೆ. ಪ್ರಸ್ತುತ ಪ್ರಾಪ್ತ ವಯಸ್ಕಳಾಗಿರುವ ಆಕೆ ನೀಡಿದ ದೂರಿನಂತೆ ಪುತ್ತೂರು ತಾಲೂಕಿನ ಕೋಡಿಯಡ್ಕ ನಿವಾಸಿ ಬೆಳಿಯಪ್ಪ ಗೌಡ ಅವರ ಪುತ್ರ, ಪುತ್ತೂರಿನ ಪರ್ಲಡ್ಕದಲ್ಲಿ ಕೋಳಿ ಫಾರ್ಮ್ ಹೊಂದಿರುವ ರಾಹುಲ್ ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ದೂರು ನೀಡಿರುವ ವಿದ್ಯಾರ್ಥಿನಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಸಂದರ್ಭದಲ್ಲಿ ಆರೋಪಿ ರಾಹುಲ್ ಆಕೆಗೆ ಕೋಳಿ ಫಾರ್ಮ್‍ನಲ್ಲಿ ಲೈಂಗಿಕ ಕಿರುಕುಳ ನೀಡಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದಾರೆ.







