ಪುತ್ತೂರು: ಜ7-8ರಂದು ಸಸ್ಯ ಜಾತ್ರೆ
ಮಂಗಳೂರು: ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.7 ಮತ್ತು 8ರಂದು ಪುತ್ತೂರಿನ ಕಿಲ್ಲೆ ಮೈದಾ ನದಲ್ಲಿ ಸಸ್ಯಜಾತ್ರೆ ಆಯೋಜಿ ಸಲಾಗಿದೆ ಎಂದು ಸುದ್ದಿ ಮಾಹಿತಿ ಟ್ರಸ್ಟ್ ಮುಖ್ಯಸ್ಥ ಡಾ.ಯು.ಪಿ.ಶಿವಾನಂದ ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಭಾರತದ ಮೂಲ ಕಸುಬಾದ ವ್ಯವಸಾಯ ಕ್ಷೇತ್ರ ಇಂದು ಅನೇಕ ಸಮಸ್ಯೆ, ಸಂಕಷ್ಟಗಳ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ದೇಶದ ಸರಳ ಮತ್ತು ಸುಲಭ ಕೃಷಿ ವಿಧಾನ ಗಳೊಂದಿಗೆ ಕೃಷಿಯಲ್ಲಿ ಸಮಸ್ಯೆ, ಸಂಕಷ್ಟ ದೂರ ಮಾಡಿ, ಉತ್ಪನ್ನಗಳ ಮೌಲ್ಯವ ರ್ಧನೆಯೊಂದಿಗೆ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿಯೂ ಕೃಷಿ ಬಗ್ಗೆ ಆಸಕ್ತಿ ಹುಟ್ಟಿಸಿ ಮುಂದಿನ ಜನಾಂಗ ಕೃಷಿಯನ್ನು ಅನುಸರಿಸಿಕೊಂಡು ಹೋಗಲು ಆರೋಗ್ಯಕ್ಕಾಗಿ ಕೃಷಿ, ಅಲಂಕಾರಕ್ಕಾಗಿ ಕೃಷಿ ಎಂಬ ಮಹದಾಶಯದೊಂದಿಗೆ ಕೃಷಿಕರಿಗೆ ನೆರವಾಗುವ ದೃಷ್ಟಿಕೋನದಿಂದ ಸುದ್ದಿ ಮಾಹಿತಿ ಟ್ರಸ್ಟ್ ಆಶ್ರಯದಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ ಕೃಷಿ ಕೇಂದ್ರ ಕೆಲಸ ನಿರ್ವಹಿಸುತ್ತಿದ್ದು, ಬಂಟ್ವಾಳ ಹಾಗೂ ಮಂಗಳೂರಿನಲ್ಲೂ ಕೇಂದ್ರ ಆರಂಭಗೊ ಳ್ಳಲಿದೆ. ಸುದ್ದಿ ಕೃಷಿ ಸೇವಾ ಕೇಂದ್ರದ ಮುಂದುವರಿದ ಯೋಜನೆಗಳ ಭಾಗವಾಗಿ ಪುತ್ತೂರಿನಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಕೃಷಿ ಸೇವಾ ಕೇಂದ್ರದ ನೇತೃತ್ವದಲ್ಲಿ ಪುತ್ತೂರು ತಾ.ಪಂ, ದ.ಕ.ಜಿ.ಪಂ ಮತ್ತು ನಗರಸಭೆಯ ಸಹಯೋಗದಿಂದೊಂದಿಗೆ ಸಂಜೀವಿನಿ ಒಕ್ಕೂಟದ ಸಂತೆ, ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ದ.ಕ. ಜಿಲ್ಲಾ ವ್ಯಾಪ್ತಿಯ ಕೃಷಿ ವಿಚಾರ ಸಂಕಿರಣ ಹಾಗೂ ಗಿಡಗಳ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದೊಂದಿಗೆ ಸಸ್ಯ ಜಾತ್ರೆ ಏರ್ಪಡಿಸಲಾಗಿದೆ ಕೃಷಿ ನರ್ಸರಿಗಳ ಪ್ರದರ್ಶನದ ಜೊತೆಗೆ ಸ್ಟಾಲ್‌ಗಳನ್ನು ಹಾಕಿ, ಅಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರಾಟ ಹಾಗೂ ಪ್ರದರ್ಶನಕ್ಕೆ ವೇದಿಕೆ ನೀಡಬೇಕೆಂಬುದು ಸಸ್ಯ ಜಾತ್ರೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ ಅವರು ಮನೆಯಂಗಳದಲ್ಲಿ ಹೋಮ್ ಗಾರ್ಡನ್, ಟೆರೇಸ್ ಗಾರ್ಡನ್‌ಗಾಗಿ ಹೂವಿನ ಗಿಡ, ಹಣ್ಣಿನ ಗಿಡ, ತರಕಾರಿ ಗಿಡ ನೆಡುವುದರ ಮಾಹಿತಿ, ಔಷಧೀಯ ಸಸಿಗಳ ಬೆಳೆಸುವಿಕೆ, ಮನೆಮನೆಯಲ್ಲಿ ಜೇನು ಕೃಷಿ ಮಾಡುವ ಮುಖಾಂತರ ಮನೆಯಂಗಳ ಹಾಗೂ ಕೃಷಿಯಂಗಳದಲ್ಲಿ ಆರೋಗ್ಯಕರ ವಾತಾವರಣ ಕಲ್ಪಿಸುವುದೂ ನಮ್ಮ ಉದ್ದೇಶವಾಗಿದೆ ಎಂದರು.
ನಾಳೆ ಸಸ್ಯ ಜಾತ್ರೆ ಜಾಥಾ: ಜ. 7ರಂದು ಬೆಳಿಗ್ಗೆ ಪುತ್ತೂರಿನ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಸಸ್ಯ ಜಾತ್ರೆಯ ಜಾಥಾಗೆ ಚಾಲನೆ ದೊರೆಯಲಿದ್ದು, ಕಿಲ್ಲೆ ಮೈದಾನದಲ್ಲಿ ಸ್ಟಾಲ್ ಗಳ ವೀಕ್ಷಣೆ ನಡೆಸಲಿದ್ದಾರೆ. ಸಂಜೀವಿನಿ ಒಕ್ಕೂಟದ ಸಾಧಕರು ಮತ್ತು ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದ ಡಾ.ಶಿವಾನಂದರವರು ಜ.7 ಹಾಗು 8ರಂದು ಹಲವಾರು ವಿಷಯಗಳಲ್ಲಿ ತಜ್ಞರಿಂದ ವಿಚಾರ ಸಂಕಿರಣ ನಡೆಯಲಿದೆ ಎಂದು ತಿಳಿಸಿದರು.
ಜ. 7ರಂದು ಅಪರಾಹ್ನ 2ರಿಂದ ವಿವಿಧ ತಜ್ಞರಿಂದ ಟೆರೇಸ್ ಗಾರ್ಡನ್‌ನಲ್ಲಿ ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಔಷಧೀಯ ಸಸ್ಯಗಳು ಮತ್ತು ಮೀನು ಕೃಷಿ ಕುರಿತು ವಿಚಾರ ಸಂಕಿರಣ ನಡೆಯಲಿದೆ. ರಾತ್ರಿ 9.30ರವರೆಗೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಜ. 8ರಂದು ಬೆಳಿಗ್ಗೆ ಅಡಿಕೆ ಕೃಷಿಯ ಸಮಸ್ಯೆಗಳು, ಅಡಿಕೆಗೆ ಪರ್ಯಾಯ ಕೃಷಿ, ಜೇನು ಕೃಷಿ, ಅಪರಾಹ್ನ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಸಾಧಕರಿಂದ ಸಂವಾದ ನಡೆಯಲಿದೆ. ಸಂಜೆ 4ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ರಾತ್ರಿ 9.30ರವರೆಗೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ವಿಚಾರ ಸಂಕಿರಣವನ್ನು ಅರ್ಥ ಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವ ದೃಷ್ಠಿಯಿಂದ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ತಾವು ಭಾಗವಹಿಸುವ ವಿಷಯ ನಮೂದಿಸಿ ಸ್ಥಳಾವಕಾಶಕ್ಕಾಗಿ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಸುದ್ದಿ ಮಾಹಿತಿ ಟ್ರಸ್ಟಿನ ಪ್ರತಿನಿಧಿಗಳಾದ ಭಾಸ್ಕರ್ ರೈ ಕಟ್ಟ, ಸಂತೋಷ್ ಕುಮಾರ್ ಶಾಂತಿನಗರ, ಕು.ಸಿಂಚನಾ ಊರುಬೈಲು, ಮಹಮ್ಮದ್ ಪೆರುವಾಯಿ ಮತ್ತು ಕುಶಾಲಪ್ಪ ಅಗಳಿರವರು ಉಪಸ್ಥಿತರಿದ್ದರು.