ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರುವ ಅಗತ್ಯವಿರಲಿಲ್ಲ: ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಿ.ಸಿ.ಪಾಟೀಲ್
ವಿಧಾನಸೌಧದಲ್ಲಿ 10 ಲಕ್ಷ ರೂ.ನಗದು ಪತ್ತೆ ಪ್ರಕರಣ

ಬೆಂಗಳೂರು, ಜ. 6: ‘ವಿಧಾನಸೌಧದಲ್ಲಿ ಪತ್ತೆಯಾಗಿರುವ ಹಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ, ಪ್ರತಿಪಕ್ಷ ನಾಯಕರು ನನ್ನ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ವಿಪಕ್ಷ ನಾಯಕರಿಗೆ ಹಣ ನೀಡಲು ಹೋಗಿರಬಹುದೆಂದು ನಾನು ಹೇಳಬಹುದಲ್ಲವೇ?’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಣದ ಜೊತೆಗೆ ವಿಧಾನಸೌಧಕ್ಕೆ ಬಂದಿದ್ದ ಅಧಿಕಾರಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆತ ಹಣವನ್ನು ಕೊಡಲು ವಿಧಾನಸೌಧಕ್ಕೆ ಬರುವ ಅಗತ್ಯವಿರಲಿಲ್ಲ. ಬೇರೆ ಕಡೆಯೂ ಹಣ ನೀಡಬಹುದಿತ್ತಲ್ಲವೇ? ಎಂದು ಕೇಳಿದರು.
‘10 ಲಕ್ಷ ರೂ.ಹಣ ತಂದಿದ್ದ ಅಧಿಕಾರಿ ಹುಚ್ಚನಿರಬೇಕು. ಹೀಗಾಗಿಯೇ ತನ್ನ ಬ್ಯಾಗ್‍ನಲ್ಲಿ ಹಣವಿದೆ ಎಂದು ಒಪ್ಪಿಕೊಂಡಿದ್ದಾನೆ. ಹಣ ಯಾರಿಗೆ ಸೇರಿದ್ದು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಪೊಲೀಸರ ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ. ಆದರೆ, ಅದಕ್ಕೂ ಮೊದಲು ಆರೋಪ ಮಾಡುವುದು ಸರಿಯಲ್ಲ’ ಎಂದು ಸಿ.ಸಿ.ಪಾಟೀಲ್ ಆಕ್ಷೇಪಿಸಿದರು.
ವಿಧಾನಸಭೆ ಚುನನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕುಮಾರಸ್ವಾಮಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈಗಾಗಲೇ 10ಲಕ್ಷ ರೂ.ನಗದು ಪ್ರಕರಣ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶಿಸಿದ್ದು, ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು.
‘ನಾನು ಈ ಪ್ರಕರಣದಲ್ಲಿ ಯಾರ ಮೇಲೆಯೂ ಒತ್ತಡ ಹೇರಿಲ್ಲ. ಬಂಧಿತ ವ್ಯಕ್ತಿ ತನ್ನ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ದರೆ ಕ್ರಮ ಜರುಗಿಸಲಾಗುತ್ತದೆ. ಆದರೆ, ನಾನು ಇದರ ಹೊಣೆ ಏಕೆ ಹೊತ್ತುಕೊಳ್ಳಲಿ ಎಂದ ಅವರು, ಇಪ್ಪತ್ತ್ನಾಲ್ಕು ಗಂಟೆ ಅಧಿಕಾರಿ ಪೊಲೀಸ್ ವಶದಲ್ಲಿದ್ದರೆ ಅಮಾನತ್ತು ಮಾಡಲಾಗುತ್ತದೆ. ನಾನು ವಿಕಾಸಸೌಧದಲ್ಲಿ ಇದ್ದಿದ್ದು, ಹಣ ಸಿಕ್ಕಿದ್ದು ಒಂದೇ ಸಮಯ ಎಂದಾದರೆ ವಿಧಾನಸೌಧಕ್ಕೆ ಬರಲೇಬಾರದೇ? ಎಂದು ಪಾಟೀಲ್ ಪ್ರಶ್ನಿಸಿದರು.
ಅವರ್ಯಾರೋ ಗೊತ್ತಿಲ್ಲ: ‘ಸ್ಯಾಂಟ್ರೋ ರವಿ ಯಾರು ಎಂದು ನನಗೆ ಗೊತ್ತಿಲ್ಲ. ನಿನ್ನೆಯಷ್ಟೇ ನಾನು ಆತನ ಹೆಸರನ್ನು ನಾನು ಕೇಳಿದ್ದು. ಕುಮಾರಕೃಪಾ ಅತಿಥಿ ಗೃಹ ಡಿಪಿಆರ್ ವ್ಯಾಪ್ತಿಗೆ ಬರುತ್ತದೆ. ನನ್ನ ಮತ ಕ್ಷೇತ್ರದ ಯಾರಾದರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಎಂದು ಬಂದರೇ ಅವರಿಗೆ ವಾಸ್ತವ್ಯಕ್ಕೆ ಅತಿಥಿ ಗೃಹ ಕೊಡಸಿದ್ದೇನೆ ಅಷ್ಟೇ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.
‘ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಡಿ’ ಅಡಿಯಲ್ಲಿ ಮೀಸಲಾತಿ ಕಲ್ಪಿಸಲು ಸರಕಾರ ತೀರ್ಮಾನಿಸಿದೆ. ಆಯೋಗದ ಅಂತಿಮ ವರದಿ ಬಳಿಕ ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗುತ್ತದೆ. ಆ ಪ್ರಕ್ರಿಯೆಗೆ ಮೊದಲೇ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಸರಕಾರಕ್ಕೆ ಗಡವು ನೀಡುವುದು ಸಲ್ಲ. ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಲಿದೆ’
-ಸಿ.ಸಿ.ಪಾಟೀಲ್ ಲೋಕೋಪಯೋಗಿ ಸಚಿವ







