ಮಂಗಳೂರು: ಕೆಆರ್‌ಎಸ್ ಪಕ್ಷ ಬೆಂಬಲಿಸಲು ಮನವಿ
ಮಂಗಳೂರು: ಕೆಆರ್‌ಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸಲಾಗುವುದು. ರಾಜ್ಯದ ಎಲ್ಲ ಕಾರ್ಖಾನೆ, ಸಾಫ್ಟ್‌ವೇರ್ ಉದ್ಯಮಗಳಲ್ಲಿ ಸ್ಥಳೀಯ ಕೌಶಲಭರಿತ ಕನ್ನಡಿಗರಿಗೆ ಉದ್ಯೋಗ ನೀಡಲು ಕಾನೂನು ಮಾಡಲಾಗುವುದು. ಸ್ಥಳೀಯ ಕೌಶಲ ಹೊಂದಿದ ಉದ್ಯೋಗಗಳಿಗೆ ಮಾನ್ಯತೆ ನೀಡಿ, ಯುವ ಜನರು ತಮ್ಮ ಗ್ರಾಮಗಳಿಂದಲೇ ಉದ್ಯೋಗ ಸೃಷ್ಟಿಸಿಕೊಳ್ಳುವ ವಾತಾವರಣ ನಿರ್ಮಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಆದ್ದರಿಂದ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧುಸ್ವಾಮಿ ಮನವಿ ಮಾಡಿದ್ದಾರೆ.
ಕರುನಾಡು ಕಟ್ಟೋಣ ಅಭಿಯಾನದ ಅಂಗವಾಗಿ ಮಂಗಳೂರಿಗೆ ಆಗಮಿಸಿರುವ ಪಕ್ಷದ ತಂಡದ ಜತೆ ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅವೈಜ್ಞಾನಿಕ ಅಭಿವೃದ್ಧಿ ಮೂಲಕ ಜನರ ತೆರಿಗೆ ಪೋಲು ಮಾಡಲಾಗುತ್ತಿದೆ. ವ್ಯಾಪಕ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಆಡಳಿತದಿಂದ ಜನ ಬೇಸತ್ತಿದ್ದಾರೆ. ಬಡವರು ಸರಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಕೆಲಸವಾಗುತ್ತಿಲ್ಲ. ಬಡ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲೆಯ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ, ಉತ್ತಮ ಶಿಕ್ಷಣ ನೀಡುತ್ತಿಲ್ಲ. ಕಳಪೆ ಗುಣಮಟ್ಟದ ರಸ್ತೆಗಳ ನಿರ್ಮಾಣವಾಗುತ್ತಿದೆ. ಮೂಲ ಸೌಕರ್ಯ ಅರ್ಹರಿಗೆ ಸಿಗುತ್ತಿಲ್ಲ ಎಂದು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಲೆಕ್ಸಾಂಡರ್, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಾ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ, ಮಂಜುನಾಥ ಬೆಂಗಳೂರು, ಮಹದೇವಣ್ಣ ಉಪಸ್ಥಿತರಿದ್ದರು.







