ಮದುವೆ ಸಂದರ್ಭ ಮಾಡಿದ ಪ್ರಮಾಣವೇ ಸ್ಫೂರ್ತಿ: ಡಾ. ರೊನಾಲ್ಡ್ ಕೊಲಾಸೊ

ರೊನಾಲ್ಡ್ ಕೊಲಾಸೊ ಅವರು ತಮ್ಮ ಬದುಕಿನ ಸಾರ್ಥಕತೆಯ ಗುಟ್ಟನ್ನು ಮತ್ತೊಮ್ಮೆ ರಟ್ಟು ಮಾಡಿದರು. ಅದು ಅವರ ಮದುವೆ ಸಂದರ್ಭ. ಧರ್ಮ ಗುರುಗಳ ಸಮ್ಮುಖದಲ್ಲಿ ದಾಂಪತ್ಯದ ಪ್ರಮಾಣ ಸ್ವೀಕರಿಸಬೇಕಿತ್ತು. ದಾಂಪತ್ಯದ ಪ್ರಮಾಣ ಸ್ವೀಕರಿಸುವ ಗಳಿಗೆ ಬಂದಾಗ, ಕೊಲಾಸೊ ದಂಪತಿ ಮಾಡಿದ್ದು ಸಮಾಜ ಸೇವೆಯ ಪ್ರಮಾಣ. ತಮ್ಮ ದುಡಿಮೆಯ, ತಮ್ಮ ಗಳಿಕೆಯ ಒಂದಷ್ಟು ಪ್ರಮಾಣವನ್ನು ಜನರಿಗಾಗಿ, ದೇಶಕ್ಕಾಗಿ, ವಿಶ್ವದ ಶಾಂತಿಗಾಗಿ ನೀಡುವ ಪ್ರಮಾಣವನ್ನು ರೊನಾಲ್ಡ್ ಕೊಲಾಸೊ ಹಾಗು ಜೀನ್ ಕೊಲಾಸೊ ದಂಪತಿ ಸ್ವೀಕರಿಸಿದ್ದನ್ನು ಡಾ. ರೊನಾಲ್ಡ್ ಕೊಲಾಸೊ ಸ್ಮರಿಸಿದರು.
ಬಳಿಕ ಮಾತು ಮುಂದುವರೆಸಿದ ಅವರು, ಮಾನವೀಯತೆಯನ್ನು ಆಚರಿಸಲು ದೇವರು ಪ್ರತಿಯೊಬ್ಬರಿಗೂ ಒಂದೇ ಅವಕಾಶ ಕೊಡುತ್ತಾರೆ. ನನಗೂ ಆ ಒಂದು ಅವಕಾಶ ಬಂದಿತ್ತು. ನನಗೆ ಬಂದಿದ್ದ ಅವಕಾಶದಲ್ಲಿ ನಾನು ನನ್ನ ಕೈಯಲ್ಲಿ ಆದಷ್ಟು ಸಮಾಜಕ್ಕೆ ನೀಡಿದ್ದೇನೆ. ಏಕೆಂದರೆ ಇಂದು ನನ್ನ ಬಳಿ ಏನೇನು ಇದೆಯೋ ಅದೆಲ್ಲವನ್ನೂ ನೀಡಿದ್ದೇ ಸಮಾಜ.
ನಾವು ಪ್ರತಿ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಬ್ಯಾಂಕ್ ಬ್ಯಾಲೆನ್ಸ್, ನಮ್ಮ ಬಳಿ ಇರುವ ಬಂಗಲೆ, ಕಾರುಗಳು ಇತರೆ ಆಸ್ತಿಗಳ ಮೂಲಕ ನಮ್ಮ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದರಲ್ಲಿ ನಾವು ತೃಪ್ತಿ ಪಡಬಾರದು. ಪ್ರತಿ ವರ್ಷ ನಾವು ಎಷ್ಟು ಹೃದಯಗಳನ್ನು ಮುಟ್ಟಿದ್ದೇವೆ, ಎಷ್ಟು ಹೃದಯಗಳ ಪ್ರೀತಿಯನ್ನು ಸಂಪಾದಿಸಿದ್ದೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಸಾರ್ಥಕತೆಯನ್ನು ಅಳೆಯಬೇಕು. ನಾನು ಪ್ರತಿ ವರ್ಷ ಮಾಡುವುದು ಇದನ್ನೇ ಎಂದರು.
ಅಂತಿಮವಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರನ್ನೂ ಎದ್ದು ನಿಲ್ಲುವಂತೆ ವಿನಂತಿಸಿದ ಕೊಲಾಸೊ ಅವರು, ಎಲ್ಲರೂ ಎದ್ದು ನಿಂತ ಬಳಿಕ "ತಮ್ಮ ಒಟ್ಟು ಗಳಿಕೆಯ ಸಣ್ಣ ಪ್ರಮಾಣವನ್ನಾದರೂ ಈ ಸಮಾಜಕ್ಕಾಗಿ ಮುಡಿಪಾಗಿ ಇಡುತ್ತೇವೆ. ಗ್ರಾಮೀಣ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ವ್ಯಯ ಮಾಡುತ್ತೇವೆ. ಮಕ್ಕಳ ಶಾಲಾ ಪುಸ್ತಕ, ಸಮವಸ್ತ್ರಕ್ಕಾದರೂ ನಮ್ಮ ಗಳಿಕೆಯ ಒಂದು ಪಾಲನ್ನು ನೀಡುತ್ತೇವೆ" ಎನ್ನುವ ಪ್ರಮಾಣವಚನ ಬೋಧಿಸಿದರು.