"ಜನೋತ್ಸವವಾಗಿ ಯಶಸ್ವಿಯಾಗಲಿ...": ಜನಸಾಹಿತ್ಯ ಸಮ್ಮೇಳನಕ್ಕೆ ನಟ ಕಿಶೋರ್ ಕುಮಾರ್ ಹಾರೈಕೆ

ಬೆಂಗಳೂರು, ಜ. 6: ಜ.8ರಂದು ರವಿವಾರ ನಗರದ ಕೆ.ಆರ್.ವೃತ್ತದಲ್ಲಿನ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ನಡೆಯಲಿರುವ ‘ಜನ ಸಾಹಿತ್ಯ ಸಮ್ಮೇಳನ’ಕ್ಕೆ ನಟ ಕಿಶೋರ್ ಶುಭ ಹಾರೈಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ನಟ ಕಿಶೋರ್, ಜನಸಾಹಿತ್ಯ ಸಮ್ಮೇಳನ ಜನೋತ್ಸವವಾಗಿ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
''ಆಳುವ ಅರೆಮನೆಗೆ ಸೀಮಿತವಾಗಿದ್ದ ಸಾಹಿತ್ಯ, 12ನೇ ಶತಮಾನದ ವಚನಕಾರರ ಬಂಡಾಯದಿಂದ ಜನಸಾಹಿತ್ಯ ಕ್ರಾಂತಿಯಾದ ಹಾಗೆ ಒಡೆದಾಳುವ ನಿರಂಕುಶ ಧರ್ಮಾಂಧ ರಾಜಕಾರಣದ ಸಂಕೋಲೆಯಿಂದ ಮುಕ್ತವಾಗಿ, ಕನ್ನಡ ನಾಡಿನ ಅಸ್ಮಿತೆಯ, ಸಾಂಸ್ಕೃತಿಕ ಜೀವಂತಿಕೆಯ, ಸೃಜನಶೀಲ ಜೀವಶಕ್ತಿಯ, ಜೀವ ಪ್ರೀತಿಯ ಸಂಕೇತವಾಗಿ, ಜನಸಾಹಿತ್ಯ ಸಮ್ಮೇಳನ ಜನೋತ್ಸವವಾಗಿ ಯಶಸ್ವಿಯಾಗಲೆಂಬ ಹಾರೈಕೆ..'' ಎಂದು ಕಿಶೋರ್ ಬರೆದುಕೊಂಡಿದ್ದಾರೆ.
ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರಂಪರೆ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಕಡೆಗಣನೆ ಖಂಡಿಸಿ, ಪರ್ಯಾಯವಾಗಿ ‘ಜನ ಸಾಹಿತ್ಯ ಸಮ್ಮೇಳನ’ವನ್ನು ಏರ್ಪಡಿಸಲಾಗಿದೆ.







