ಕಬಕ ಪುತ್ತೂರಿನಲ್ಲಿ ರೈಲ್ವೆ ಕಾಮಗಾರಿ: ಇಂದು ರೈಲು ಸಂಚಾರದಲ್ಲಿ ವ್ಯತ್ಯಯ
ಉಡುಪಿ: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಕಬಕ ಪುತ್ತೂರಿನಲ್ಲಿ ಶನಿವಾರ ತಾತ್ಕಾಲಿಕ ಗ್ರೈಡರ್ ಅಳವಡಿಕೆ ಕಾಮಗಾರಿ ನಡೆಯಲಿರುವುದರಿಂದ ಸುಮಾರು ಎಂಟು ಗಂಟೆಗಳ ಕಾಲ ರೈಲ್ವೆ ಹಳಿಯನ್ನು ಮುಚ್ಚಲಿದ್ದಾರೆ. ಇದರಿಂದಾಗಿ ಮಂಗಳೂರಿಗೆ ಬರುವ ಹಾಗೂ ಹೋಗುವ ಕೆಲವು ರೈಲುಗಳ ಸಂಚಾರದಲ್ಲಿ ನಾಳೆ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ನಾಳೆ (ಜ.7) ಕಾರವಾರದಿಂದ ತನ್ನ ಪ್ರಯಾಣವನ್ನು ಒಂದು ಗಂಟೆ 40 ನಿಮಿಷ ತಡವಾಗಿ ಪ್ರಾರಂಭಿಸಲಿದ್ದು, 7:10ಕ್ಕೆ ಅಲ್ಲಿಂದ ನಿರ್ಗಮಿಸಲಿದೆ.
ಅದೇ ರೀತಿ ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ರೈಲು ಶನಿವಾರದ ತನ್ನ ಸಂಚಾರವನ್ನು ತೋಕೂರು ನಿಲ್ದಾಣದಲ್ಲಿ ಕೊನೆಗೊಳಿಸಲಿದ್ದು, ತೋಕೂರಿನಿಂದ ಮಂಗಳೂರು ಸೆಂಟ್ರಲ್ ವರೆಗಿನ ಸಂಚಾರವನ್ನು ರದ್ದುಪಡಿಸಲಾಗಿದೆ.
ಅದೇ ರೈಲು (ನಂ.10108) ತನ್ನ ಮರು ಪ್ರಯಾಣವನ್ನು ತೋಕೂರು ನಿಲ್ದಾಣದಿಂದ ಅಪರಾಹ್ನ 3:40ಕ್ಕೆ ಪ್ರಾರಂಭಿಸಲಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.





