ಉತ್ತರಕನ್ನಡ: ಪ್ರವಾಸಕ್ಕೆ ತೆರಳಿದ್ದ ಟ್ರ್ಯಾಕ್ಟರ್ ಉರುಳಿ ವಿದ್ಯಾರ್ಥಿನಿಯರು ಗಂಭೀರ

ಮುಂಡಗೋಡ: ಮಳಗಿ ಸರಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಪ್ರವಾಸಕ್ಕೆ ಹೋಗಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಹಲವು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡು, ಮತ್ತೆ ಹಲವರಿಗೆ ತಲೆ, ಕೈ , ಕಾಲು ಹಣಗೆ ಪೆಟ್ಟು ಬಿದ್ದು ಶಿರಸಿ ಸರಕಾರಿ ಆಸ್ಪತ್ರೆಗೆ ಹಾಗೂ ಮುಂಡಗೋಡ ಸರಕಾರಿ ಆಸ್ಪತ್ರೆ ದಾಖಲಾದ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆ ಮಳಗಿ ಗ್ರಾಮದಲ್ಲಿ ನಡೆದಿದೆ.
ಮಳಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಗೆ ಮಳಗಿ, ಕೊಡಂಬಿ, ಕಾತೂರ, ಚಿಗಳ್ಳಿ ಪಂಚಾಯತ್ ವ್ಯಾಪ್ತಿಯ ಬಹುತೇಕ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾರ್ಜನೆಗೆ ಬರುತ್ತಾರೆ. ಶುಕ್ರವಾರ ಸರಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಕಾಲೇಜ್ ಉಪನ್ಯಾಸಕರು ಶುಕ್ರವಾರ ಮಳಗಿ ಪಂಚಾಯತ್ ವ್ಯಾಪ್ತಿಯ ಕೊಳಗಿ ಗ್ರಾಮದ ತೋಟಕ್ಕೆ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.
ಟ್ರ್ಯಾಕ್ಟರ್ ಗಳ ಮೂಲಕ ಪ್ರವಾಸಕ್ಕೆ ಹೋಗಲು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಬೇರೆ ಬೇರೆ ಟ್ರ್ಯಾಕ್ಟರ್ ಗೊತ್ತುಪಡಿಸಲಾಗಿದ್ದು, ಪ್ರವಾಸ ಮುಗಿಸಿಕೊಂಡು ಕೊಳಗಿ ಗ್ರಾಮದಿಂದ ಮರಳಿ ಮಳಗಿ ಗ್ರಾಮಕ್ಕೆ ಬರುತ್ತಿದ್ದಾಗ ಹುಬ್ಬಳ್ಳಿ-ಶಿರಸಿ ರಸ್ತೆಯ ಮಳಗಿ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ವಿದ್ಯಾರ್ಥಿನಿಯರು ಇದ್ದ ಟ್ರ್ಯಾಕ್ಟರ್ ರಸ್ತೆಗೆ ಉರಳಿ ಬಿದ್ದಿದೆ.
ಈ ಘಟನೆಯಲ್ಲಿ ಹಲವಾರು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ಕೆಲ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕೆಲವು ವಿದ್ಯಾರ್ಥಿನಿಯರನ್ನು ಮುಂಡಗೋಡ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನುಳಿದ ವಿದ್ಯಾರ್ಥಿನಿಯರನ್ನು ಶಿರಸಿ ಸರಕಾರಿ ಆಸ್ಪತ್ರೆಗೆ ಕೊಂಡಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಅತಿಥಿ ಉಪನ್ಯಾಸಕರು ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು ಹಾಗೂ ಟ್ರ್ಯಾಕ್ಟರ್ ನಲ್ಲಿ 40-50 ವಿದ್ಯಾರ್ಥಿನಿಯರು ಇದ್ದರು ಎಂದು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಶಿರಸಿ ಆಸ್ಪತ್ರೆಯಲ್ಲಿ ಗಂಭೀರವಾಗಿ ಗಾಯಗೊಂಡು ದಾಖಲಾಗಿದ್ದ ಸುಮಾರು 14 ವಿದ್ಯಾರ್ಥಿನಿಯರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲು ಸೂಚಿಸಲಾಗಿದೆ. 4 ವಿದ್ಯಾರ್ಥಿನಿಯರ ಸ್ಥಿತಿ ಶೋಚನೀಯವಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳಿಗೆ ಟ್ರ್ಯಾಕ್ಟರ್ ಗಳ ಮೂಲಕ ಪ್ರವಾಸಕ್ಕೆ ಕೊಂಡೊಯ್ಯಲು ಮಳಗಿ ಸರಕಾರಿ ಕಾಲೇಜ್‍ಗೆ ಏನು ಅಗತ್ಯ ಇತ್ತು. ಗ್ರಾಮದ ವಿದ್ಯಾರ್ಥಿಗಳೆಂದು ಈ ಮನೋಭಾವನೆ ಕಾಲೇಜು ಸಿಬ್ಬಂದಿ ವರ್ಗ ಈ ಮನೋಭಾನೆ ತಾಳಿದಿಯೇ ಎಂದು ತಾಲೂಕಾದ್ಯಂತ ಸಾರ್ವಜನಿಕರು ಪ್ರಶ್ನಿಸಿದ್ದು, ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಎಸ್.ಎಸ್.ಸಿಮಾನಿ ತಮ್ಮ ಸಿಬ್ಬಂದಿಯೊಡನೆ ಭೇಟಿನೀಡಿ ಪರಿಶೀಲಿಸಿದ್ದಾರೆ.
ಆಸ್ಪತ್ರೆಗೆ ಭೇಟಿನೀಡಿದ ಪೊಲೀಸರು ವಿದ್ಯಾರ್ಥಿನಿಯರ ಆರೋಗ್ಯ ಹಾಗೂ ಘಟನೆ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರನ್ನು ಪಾಲಕರು ಸೇರಿದಂತೆ ಬಂಧುಬಳಗ ಹಾಗೂ ಆಯಾ ಗ್ರಾಮಗಳಿಗೆ ಸಂಬಂದಪಟ್ಟ ಗ್ರಾಮಸ್ಥರು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಲು ಆಗಮಿಸುತ್ತಿರುವ ದೃಶ್ಯ ಕಂಡು ಬಂದಿದೆ.






.jpg)
.jpg)

