ಬೆಂಗಳೂರು | ಪೊಲೀಸರ ವಶದಲ್ಲಿದ್ದ ದಲಿತ ಯುವಕನ ಸಾವು ಪ್ರಕರಣ: ಲಾಕಪ್ ಡೆತ್ ಆರೋಪ
ಸ್ಲಂ ಮಹಿಳಾ ಸಂಘಟನೆಯಿಂದ ಡಿಸಿಪಿಗೆ ದೂರು

ಬೆಂಗಳೂರು, ಜ.6: ಬೆಂಗಳೂರಿನ ಜಾಲಿ ಮೊಹಲ್ಲಾದ ನಿವಾಸಿ ದಲಿತ ಯುವಕ ವಿನೋದ್ ಎಂಬಾತ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಕೋರಿ ಹಾಗೂ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ಸ್ಲಂ ಮಹಿಳಾ ಸಂಘಟನೆಯವರು ಉಪ್ಪಾರಪೇಟೆ ಪೊಲೀಸ್ ಠಾಣೆ ಪಶ್ಚಿಮ ವಲಯದ ಉಪ ಪೊಲೀಸ್ ಆಯುಕ್ತ(ಡಿಸಿಪಿ)ರಿಗೆ ಶುಕ್ರವಾರ ದೂರು ನೀಡಿದ್ದಾರೆ.
ಈ ದೂರಿನಲ್ಲಿ, ಠಾಣೆಯಲ್ಲೇ ಸಾವನ್ನಪ್ಪಿರುವ ವಿನೋದ್ ಅವರನ್ನು ಪೊಲೀಸ್ ಠಾಣೆಯಲ್ಲಿದ್ದ ಸಮಯದ ಸಿಸಿಟಿವಿ ಫುಟೇಜ್ ನಮಗೆ ನೀಡಬೇಕು. ವಿನೋದ್ ಅವರು ಯಾಕೆ ಸತ್ತಿದ್ದು, ಹೇಗೆ ಎಂದು ತಿಳಿಸಬೇಕು. ವಿನೋದ್ ಅವರನ್ನು ಪೊಲೀಸ್ ಠಾಣೆಯಲ್ಲಿ ಬಂಧನಕ್ಕೆ ಸಂಬಂಧಿಸಿದ ದಾಖಲೆ ಪ್ರತಿ ನೀಡಬೇಕೆಂದು ಕೋರಿದ್ದಾರೆ.
ಕಾಟನ್‍ಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ಮೇಲೆ ಐಪಿಸಿ ಕಲಂ 302(ಕೊಲೆ) ಹಾಗೂ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಬೇಕು. ಅವರನ್ನು ಕರೆದುಕೊಂಡು ಹೋಗಿರುವ ಸಿಸಿಟಿವಿ ಫುಟೇಜ್ ಪ್ರಕಾರ 12.30ಕ್ಕೆ ಇದು, ಪೊಲೀಸರು ಹೇಳುತ್ತಿರುವ ಹೇಳಿಕೆ ಸಂಜೆ 4ಕ್ಕೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಕಾಟನ್‍ಪೇಟೆ ಠಾಣೆಯ ಸಿಬ್ಬಂದಿಯವರು ಅಲ್ಲಿನ ಬಡವರ ಶೋಷಿತರ ಮೇಲೆ ಮಾಡುತ್ತಿರುವ ಕಿರುಕುಳ ಬಗ್ಗೆ ತನಿಖೆ ನಡೆಸಿ, ನಾಗರಿಕರಿಗೆ ಭದ್ರತೆ ಮತ್ತು ನಿರಾತಂಕವಾಗಿ ಜೀವಿಸಲು ಅವಕಾಶವನ್ನು ಕಲ್ಪಿಸಿ, ಹಾಗೂ ಈ ಎಲ್ಲದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಮರ್ಪಕ ತನಿಖೆಯಾಗಲಿ: ದಲಿತ ಯುವಕ ವಿನೋದ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರ ಕತ್ತಿನ ಹಿಂಭಾಗದಲ್ಲಿ ರಕ್ತ ಸೋರುತ್ತಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಶವಗಾರದ ವಾಚ್‍ಮನ್ ಕೂಡ ಅದನ್ನೆ ಹೇಳಿದ್ದಾರೆ. ಆದರೆ ‘ಪೊಲೀಸರು ಪ್ರಜ್ಞೆ ತಪ್ಪಿ ಸಾವನಪ್ಪಿದ್ದಾನೆ’ ಎಂದು ಒಮ್ಮೆ, ‘ಹೃದಯಾಘಾತವಾಗಿ ಬಿದ್ದು ಸಾವನಪ್ಪಿದ್ದಾನೆ’ ಎಂದು ಮತ್ತೊಮ್ಮೆ ಹೇಳುವ ಮೂಲಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಹೀಗಾಗಿ, ಸಮರ್ಪಕ ತನಿಖೆ ನಡೆಸಿ ವಿನೋದ್ ಸಾವಿನ ನಿಖರ ಕಾರಣ ತಿಳಿಸಬೇಕು ಎಂದು ಸ್ಲಂ ಮಹಿಳಾ ಸಂಘಟನೆಯ ಮುಖಂಡೆ ಜಾನ್ಸಿ ಒತ್ತಾಯಿಸಿದ್ದಾರೆ.
ಸಿಐಡಿ ತನಿಖೆಗೆ ವರ್ಗ: ‘ದಲಿತ ಯುವಕ ವಿನೋದ್ ವಿರುದ್ಧ 2017ರಲ್ಲಿ ಕಾಟನ್‍ಪೇಟೆ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಪೊಲೀಸರು ಬಂಧಿಸಿ ಕಾಟನ್‍ಪೇಟೆ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಾತ್ರಿ ಠಾಣೆಯಲ್ಲಿ ಮಲಗಿದ್ದ ಆರೋಪಿಯನ್ನು ಗುರುವಾರ ಮುಂಜಾನೆ 3.45ರ ವೇಳೆಗೆ ಪೊಲೀಸ್ ಸಿಬ್ಬಂದಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಪ್ರಜ್ಞೆ ತಪ್ಪಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗಮಧ್ಯಯೇ ಆತ ಮೃತಪಟ್ಟಿರುವುದಾಗಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಸದ್ಯ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವೆಂದು ಪ್ರಕರಣ ದಾಖಲಿಸಿ, ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ್ದೇವೆ. ಅಲ್ಲದೆ, ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಹಿಸಲಾಗಿದೆ ಎಂದು ನಿಂಬರಗಿ ತಿಳಿಸಿದ್ದಾರೆ.







