ಅಂಬೇಡ್ಕರ್ ದೇಶದ ಸಂವಿಧಾನದಲ್ಲಿ ಪ್ರವಾದಿ ಮುಹಮ್ಮದರ ಪರಿಕಲ್ಪನೆಗಳನ್ನು ಅಳವಡಿಸಿದ್ದಾರೆ: ರಮೇಶ್ ಕುಮಾರ್

ಮಂಗಳೂರು: ಸಮಾನತೆ, ಸಹೋದರತೆ, ಪ್ರಜಾಪ್ರಭುತ್ವ ಇತ್ಯಾದಿ ಪರಿಕಲ್ಪನೆಗಳು ಪ್ರವಾದಿ ಪೈಗಂಬರ್ ಅವರದ್ದಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನದಲ್ಲಿ ಪ್ರವಾದಿ ಪೈಗಂಬರ್‌ರ ಈ ಪರಿಕಲ್ಪನೆಯನ್ನೇ ಅಳವಡಿಕೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಶುಕ್ರವಾರ ನಡೆದ ‘ಯುನಿವೆಫ್ ಕರ್ನಾಟಕ’ದ ಪ್ರವಾದಿ ಮುಹಮ್ಮದ್ (ಸ) ರ ಸಂದೇಶ ಪ್ರಚಾರ ಅಭಿಯಾನ (ಅರಿಯಿರಿ ಮನುಕುಲದ ಪ್ರವಾದಿಯನ್ನು) ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮಾಗಾಂಧಿ, ಕಾರ್ಮಿಕ ನಾಯಕ ಕಾರ್ಲ್‌ಮಾಕ್ಸ್‌ರಂತಹ ಮಹನೀಯರು ಪ್ರವಾದಿಯ ಅನುಯಾಯಿಗಳೇ ಆಗಿದ್ದಾರೆ. ಆದರೆ ಇಂದು ಸಮಾಜದಲ್ಲಿ ಧರ್ಮದ ತಿರುಳನ್ನು ಅರ್ಥ ಮಾಡಿಕೊಳ್ಳದವರು ಅದರ ಬಗ್ಗೆ ಮಾತನಾಡತೊಡಗಿದ್ದಾರೆ ಮತ್ತು ಸಮುದಾಯಗಳ ನಾಯಕರಂತೆ ಬಿಂಬಿಸಲ್ಪಡುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದ ರಮೇಶ್ ಕುಮಾರ್, ಅಯೋಧ್ಯೆಯ ರಾಜನಾಗುವ, ಅಧಿಕಾರ ನಡೆಸುವ ಎಲ್ಲಾ ಅವಕಾಶಗಳನ್ನು ತ್ಯಜಿಸಿದ ತ್ಯಾಗಮಯಿ ಶ್ರೀರಾಮನನ್ನು ಇಂದು ಕೆಲವು ರಾಜಕಾರಣಿಗಳು ಅಧಿಕಾರಕ್ಕಾಗಿ ರಾಮನ ಹೆಸರಿನಲ್ಲಿ ದೊಂಬಿ ನಡೆಸುತ್ತಿರುವುದು ವಿಪರ್ಯಾಸ ಎಂದರು.
ಪ್ರವಾದಿ ಎಂದೂ ಕೂಡ ಸರ್ವಾಧಿಕಾರವನ್ನು ಆಶಿಸಿರಲಿಲ್ಲ. ಅವರು ಸದಾ ಪ್ರಜೆಗಳ ಪ್ರಭುತ್ವಕ್ಕೆ ಆದ್ಯತೆ ನೀಡುತ್ತಿದ್ದರು. ನುಡಿದಂತೆ ನಡೆಯುತ್ತಿದ್ದರು. ಅದಕ್ಕಾಗಿ ತನ್ನ ಬದುಕನ್ನೇ ಪ್ರಯೋಗವಾಗಿಸುತ್ತಿದ್ದರು. ಅಂತಹ ಪ್ರವಾದಿಯ ಬಗ್ಗೆ, ಇಸ್ಲಾಮ್ ಧರ್ಮದ ಬಗ್ಗೆ ಏನನ್ನೂ ತಿಳಿಯದವರು ಮಾತನಾಡುವುದು ರಾಕ್ಷಸತನದ ಪರಮಾವಧಿ ಎಂದು ರಮೇಶ್ ಕುಮಾರ್ ಹೇಳಿದರು.
ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಓಟಿನ ಡಬ್ಬ ತುಂಬುವ ರಾಜಕಾರಣಿಗಳು ಅಧಿಕಾರಕ್ಕಾಗಿ ಏನನ್ನೂ ಮಾಡಲು ಹಿಂಜರಿಯುವುದಿಲ್ಲ. ಮಂಗಳೂರಿನಲ್ಲಿ ಈ ರಾಜಕಾರಣಿಗಳಿಂದ ಇನ್ನೇನು ಕಾದಿದೆಯೋ ಗೊತ್ತಿಲ್ಲ. ಅವರೇನೋ ಒಳಗಿಂದೊಳಗೆ ವ್ಯಾಪಾರ ಆರಂಭಿಸತೊಡಗಿದ್ದಾರೆ. ಆದರೆ ಅದರ ಮರ್ಮಗಳನ್ನು ಅರಿಯದ ಜನಸಾಮಾನ್ಯರು ಹೊಡೆದಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ರಮೇಶ್ ಕುಮಾರ್ ಕರೆ ನೀಡಿದರು.
ಇಸ್ಲಾಮ್‌ನಲ್ಲಿ ಮೇಲು, ಕೀಳು ಎಂಬುದಿಲ್ಲ. ಎಲ್ಲರೂ ಸರಿಸಮಾನರು ಎಂದು ಪ್ರತಿಪಾದಿಸುತ್ತದೆ. ಮುಸ್ಲಿಮರು ಸಹೋದರತೆಗೆ ಆದ್ಯತೆ ನೀಡುತ್ತಾರೆ. ಕಷ್ಟದಲ್ಲಿ ಸಿಲುಕಿರುವವರಿಗೆ ಸದಾ ಸಹಾಯಹಸ್ತ ಚಾಚುತ್ತಾರೆ. ಅಪಘಾತ, ತುರ್ತು ಸಂದರ್ಭ ಸಹಾಯ ಮಾಡಲು ಧಾವಿಸುವ ಗುಣಸ್ವಭಾವ ಮುಸ್ಲಿಮರದ್ದಾಗಿದೆ. ಕೊರೋನ ಸಂದರ್ಭ ಮುಸ್ಲಿಂ ಸಮುದಾಯ ನೀಡಿದ ನೆರವನ್ನು ಮರೆಯಲು ಸಾಧ್ಯವಿಲ್ಲ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ.ಫಾ ಪೀಟರ್ ಪೌಲ್ ಸಲ್ದಾನ ತಿಳಿಸಿದರು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ‘ಪ್ರವಾದಿ ಸಂದೇಶ ಪ್ರಚಾರ ಅಭಿಯಾನ’ದ ಸಹ ಸಂಚಾಲಕರಾದ ಉಬೈದುಲ್ಲಾ ಬಂಟ್ವಾಳ, ಆಸಿಫ್ ಕುದ್ರೋಳಿ, ತ್ವಾಹಿಫ್ ಅಹ್ಮದ್ ಉಪಸ್ಥಿತರಿದ್ದರು.
ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಸ್ವಾಗತಿಸಿದರು. ಅರೀಝ್ ಕಿರಾಅತ್ ಪಠಿಸಿದರು. ಹುದೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.