ಉಡುಪಿ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ವಿಚಾರಣೆ

ಉಡುಪಿ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಪ್ರಿಯಾಂಕ್ ಕನೊಂಗೋ ಅವರು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತ ದೂರುಗಳ ವಿಚಾರಣೆ ನಡೆಸಿ, ಕುಂದುಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿ ರೂಪಾಲಿ ಬ್ಯಾನರ್ಜಿ ಸಿಂಗ್, ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಎಎಸ್‌ಪಿ ಸಿದ್ಧಲಿಂಗಪ್ಪ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿಯಿಂದ 200 ದೂರುಗಳು: ವಿಚಾರಣಾ ಸಭೆಯ ಬಳಿಕ ಉಡುಪಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಕನೊಂಗೋ, ಜಿಲ್ಲೆಯಿಂದ ಆಯೋಗ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕೋವಿಡ್-19ಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ 200 ದೂರುಗಳನ್ನು ಸ್ವೀಕರಿಸಿತ್ತು ಎಂದರು.
ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಅರಿವಿನ ಮಟ್ಟದ ಕುರಿತಂತೆ ಅತೀವ ಹರ್ಷ ವ್ಯಕ್ತಪಡಿಸಿದ ಎನ್‌ಸಿಪಿಸಿಆರ್ ಅಧ್ಯಕ್ಷರು, ಹೆಣ್ಣು ಮಕ್ಕಳು ಶಾಲೆಗಳಲ್ಲಿ ಸ್ಯಾನಟರಿ ಪ್ಯಾಡ್‌ಗಳ ಯಂತ್ರಗಳನ್ನು ಅಳವಡಿಸುವಂತೆ ಒತ್ತಾಯಿಸಿದ್ದು, ಅವರ ಅರಿವಿನ ಮಟ್ಟವನ್ನು ತೋರಿಸಿತು ಎಂದು ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೇಶದಲ್ಲಿರುವ ಬಿಕ್ಷೆ ಬೇಡುವ ಕುಟುಂಬಗಳೂ ಸೇರಿದಂತೆ ಬೀದಿ ಮಕ್ಕಳ ಕುರಿತಂತೆ ಭಾರತ ಅತ್ಯುತ್ತಮ ಪುನರ್ವಸತಿ ಯೋಜನೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ ಎಂದು ಪ್ರಿಯಾಂಕ್ ಕನೊಂಗೋ ನುಡಿದರು.
ಜಿಲ್ಲೆಯಲ್ಲೂ ಸಾಕಷ್ಟು ಬೇಡುವ ಮಕ್ಕಳಿದ್ದಾರೆ. ಅವರಿಗೆ ಕುಟುಂಬ ಸಹಿತ ವಾಗಿ ಸಾಮಾಜಿಕ ಭದ್ರತಾ ಕಾರ್ಯಕ್ರಮದನ್ವಯ ಪುನರ್ವಸತಿ ಕಲ್ಪಿಸಬೇಕಾಗಿದೆ. ಬೀದಿ ಮಕ್ಕಳಿಗೆ ಉತ್ತಮ ಸೌಲಭ್ಯ, ಬದುಕುವ ವಾತಾವರಣ ಕಲ್ಪಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾರ್ಗಸೂಚಿಗಳನ್ನು ನೀಡುವ ಪೋರ್ಟಲ್ ಇದೆ. ಕಳೆದ ವರ್ಷ ದೇಶದಲ್ಲಿ ಒಟ್ಟು 23,000 ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಅದೇ ರೀತಿ ಲೈಂಗಿನ ದೌರ್ಜನ್ಯದ ಯಾವುದೇ ದೂರು ಸಹ ಆಯೋಗದೆದುರು ಬಂದಿಲ್ಲ ಎಂದ ಅವರು, ಸರಕಾರದ ಮಾನ್ಯತೆ ಇಲ್ಲದ ಹಾಗೂ ನಿಯಂತ್ರಣದಲ್ಲಿಲ್ಲದ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಿಗುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ತಾನು ಸೂಚನೆ ನೀಡಿದ್ದೇನೆ. ದೇಶದಲ್ಲಿ ಇಂಥ 1.1 ಕೋಟಿ ಮಕ್ಕಳಿದ್ದಾರೆ ಎಂದರು.
ಉಡುಪಿಯಂಥ ಸಣ್ಣ ಜಿಲ್ಲೆಯಲ್ಲಿ 14 ಅನಾಥಾಲಯಗಳು ಇರುವುದು ಅನಗತ್ಯ ಎಂದು ಅಭಿಪ್ರಾಯ ಪಟ್ಟ ಪ್ರಿಯಾಂಕ್ ಕನೊಂಗೋ, ಸರಕಾರ ಅನಾಥಾಲಯದ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಯತ್ನದಲ್ಲಿದ್ದು, ಇದಕ್ಕೆ ಬದಲಿಯಾಗಿ ಪುನರ್ವಸತಿಯಲ್ಲಿರುವ ಮಕ್ಕಳಿಗೆ ವಿದೇಶಗಳಲ್ಲಿರುವಂತೆ ‘ಫ್ಯಾಮಿಲಿ ಕೇರ್ ಸೆಂಟರ್’ನ್ನು ಒದಗಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶಿವಕುಮಾರಯ್ಯ ಉಪಸ್ಥಿತರಿದ್ದರು.
