ವಿಧಾನಸೌಧದಲ್ಲಿ 10 ಲಕ್ಷ ರೂ. ನಗದು ಪತ್ತೆ ಪ್ರಕರಣ: ಆರೋಪಿ ಜಗದೀಶ್‍ಗೆ ಜಾಮೀನು

ಬೆಂಗಳೂರು, ಜ.6: ವಿಧಾನಸೌಧದ ಆವರಣದಲ್ಲಿ 10.5 ಲಕ್ಷ ಹಣ ಸಿಕ್ಕ ಪ್ರಕರಣದಲ್ಲಿ ಬಂಧಿತನಾಗಿದ್ದ ಮಂಡ್ಯ ಮೂಲದ ಪಿಡಬ್ಲ್ಯೂಡಿ ಕಿರಿಯ ಎಂಜಿನಿಯರ್ ಜಗದೀಶ್‍ಗೆ ಮೇಯೋ ಹಾಲ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಿಧಾನಸೌಧದ ಆವರಣದಲ್ಲಿ 10.5 ಲಕ್ಷ ಹಣ ಸಿಕ್ಕ ಪ್ರಕರಣದಲ್ಲಿ ಜಗದೀಶ್‍ನನ್ನು ಬಂಧಿಸಿದ್ದ ವಿಧಾನಸೌಧ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೂ ಜಗದೀಶ್ ಯಾರಿಗೆ ಹಣ ಕೊಡೋಕೆ ಬಂದಿದ್ದ ಎನ್ನುವ ಮಾಹಿತಿಯನ್ನು ಬಾಯಿಬಿಟ್ಟಿರಲಿಲ್ಲ. ಹೀಗಾಗಿ, ಲಂಚದ ರೂಪದಲ್ಲಿ ಹಣ ಕೊಡಲು ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮುಂದುವರಿಸಲಾಗಿತ್ತು.
ಜಗದೀಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೊನೆಯ ದೂರವಾಣಿ ಕರೆ ಹಾಗೂ ಕೆಲ ವಾಟ್ಸಪ್ ಚಾಟ್‍ಗಳನ್ನು ಡಿಲೀಟ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಜಗದೀಶ್ ಯಾರ ಕೈಕೆಳಗೆ ಕೆಲಸ ಮಾಡ್ತಿದ್ದ ಅನ್ನೋ ಕುರಿತಾಗಿ ಮಾಹಿತಿ ಸಂಗ್ರಹ ಮಾಡಿದ್ದರು.
ಆರೋಪಿ ಬಾಯಿಬಿಡಲಿಲ್ಲ ಎಂದರೇ ಸಿನೀಯರ್ ಎಂಜನಿಯರ್‍ಗೆ ನೋಟಿಸ್ ಕೊಟ್ಟು, ವಿಚಾರಣೆ ನಡೆಸಲು ಮುಂದಾಗಿದ್ದರು. ಶುಕ್ರವಾರ ಆರೋಪಿ ಜಗದೀಶ್‍ನನ್ನ ಕೋರ್ಟ್‍ಗೆ ಹಾಜರುಪಡಿಸಿದ್ದು, ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ.







