ಕುಂದಾಪುರ ಪೊಲೀಸರ ಕಾರ್ಯಾಚರಣೆ: ಅಂತರ್ ರಾಜ್ಯ ಮನೆ ಕಳವು ಆರೋಪಿಗಳ ಬಂಧನ; 16 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಕುಂದಾಪುರ: ಕಳೆದ ಮೂರು ತಿಂಗಳ ಹಿಂದೆ ತಾಲೂಕಿನ ಕೋಟೇಶ್ವರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಕುಂದಾಪುರ ವೃತ್ತನಿರೀಕ್ಷಕರು, ಉಪನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ವೃತ್ತಿಪರ ಕಳವು ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಹೊಸದುರ್ಗ ಪೆರಿಯಾಟಡುಕಂ ನಿವಾಸಿ ಹಾಶಿಮ್ ಎ.ಎಚ್ (42) ಎಂಬಾತನನ್ನು ಕೇರಳದ ಕಾಸರಗೋಡಿನಲ್ಲಿ ಹಾಗೂ ಇನ್ನೋರ್ವ ಆರೋಪಿ ಕುಂಬಳೆ ಮಂಜೇಶ್ವರದ ಅಬೂಬಕ್ಕರ್ ಸಿದ್ದಿಕ್ (48) ಎಂಬಾತನನ್ನು ಮಡಿಕೇರಿಯಲ್ಲಿ ಬಂಧಿಸಲಾಗಿದೆ.
ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ತನಿಖಾಧಿಕಾರಿ ವೃತ್ತನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಹೆಚ್ಚಿನ ತನಿಖೆ ನಡೆಸಿದ್ದು, ಆರೋಪಿಗಳು ಜಿಲ್ಲೆಯ ಉಡುಪಿ ನಗರ ಪೊಲೀಸ್ ಠಾಣೆ, ಮಲ್ಪೆ, ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ನಡೆಸಿ, ಕಳವು ಮಾಡಿದ ಚಿನ್ನಾಭರಣಗಳನ್ನು ಕೇರಳ ಮಂಜೇಶ್ವರ ತಾಲೂಕಿನ ಜುವೆಲ್ಸರ್ಸ್ ಒಂದರಲ್ಲಿ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಜುವೆಲ್ಲರಿಯಿಂದ 15 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ, 1 ಲಕ್ಷ ಮೌಲ್ಯದ 1481 ಗ್ರಾಂ ಬೆಳ್ಳಿ ಸಹಿತ ಒಟ್ಟು 16 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಜ.6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್ ನೇತೃತ್ವದಲ್ಲಿ, ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸದಾಶಿವ ಗವರೋಜಿ, ಪ್ರಸಾದ್ ಕುಮಾರ್ ಕೆ. ಮತ್ತು ಎಎಸ್‌ಐ ಸುದಾಕರ ಹಾಗೂ ಸಿಬ್ಬಂದಿ ಗಳಾದ ಸಂತೋಷ ಕುಮಾರ್ , ಕೆ.ಯು ಸಂತೋಷ ಕುಮಾರ್, ರಾಮಪೂಜಾರಿ ಮೊದಲಾದವರ ತಂಡ ಪ್ರಕರಣದ ಆರೋಪಿಗಳನ್ನು ಪತ್ತೆ ಕಾರ್ಯಾಚರಣೆಯಲ್ಲಿದ್ದರು.
ಆ್ಯಸಿಡ್ ಪ್ರಕರಣದಲ್ಲಿ ಅಪರಾಧಿ..!
ಹಾಶೀಮ್ ಎಂಬಾತ ಆಸಿಡ್ ಪ್ರಕರಣವೊಂದರಲ್ಲಿ ಅಪರಾಧಿಯೆಂದು ಸಾಬೀತಾಗಿ ಕೇರಳದ ನ್ಯಾಯಾಲಯ ಅಪರಾಧಿಯೆಂದು ಘೋಷಿಸಿ 20 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಬಳಿಕ ಒಂದಷ್ಟು ವರ್ಷ ಜೈಲುವಾಸ ಮಾಡಿದ್ದ ಈತ ಸನ್ನಡತೆಯ ಆಧಾರದಲ್ಲಿ 2020ರಲ್ಲಿ ಬಿಡುಗಡೆಯಾಗಿದ್ದ. ಸಿದ್ದೀಕ್ ಕುಂಬ್ಳೆ ಮೇಲೆ ಕೇರಳದಲ್ಲಿ ಒಂದಷ್ಟು ಪ್ರಕರಣವಿದ್ದು ಈತ ಕೂಡ ಜೈಲಿನಲ್ಲಿದ್ದ. ಹಾಶೀಮ್ ಹಾಗೂ ಸಿದ್ದಿಕ್ ಜೈಲಿನಲ್ಲೇ ಸ್ನೇಹಿತರಾಗಿದ್ದು ಬಿಡುಗಡೆ ಬಳಿಕ ಇಬ್ಬರೇ ಕಳ್ಳತನದ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿಗಳು ಅಂತರ್ರಾಜ್ಯ ವೃತ್ತಿ ಪರ ಚೋರರಾಗಿದ್ದು ಕೇರಳ ರಾಜ್ಯದ ವಿವಿಧೆಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕೂಡಾ ಕಳ್ಳತನ ಹಾಗೂ ಇತರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಹೆದ್ದಾರಿ ಸಮೀಪದ ಮನೆಗೆ ಕನ್ನಹಾಕುವ ಅಲೆಮಾರಿ ಕಳ್ಳರು..!
ಆಶೀಮ್ ಹಾಗೂ ಸಿದ್ದಿಕ್ ಇಬ್ಬರು ಕಳ್ಳತನ ನಡೆಸಲು ದೊಡ್ಡ ಫ್ಲಾನ್ ಮಾಡುತ್ತಿರಲಿಲ್ಲ. ಬಸ್ಸು ಹತ್ತಿ ಬರುತ್ತಿದ್ದ ಅವರು ಜಿಲ್ಲಾ ಕೇಂದ್ರದಲ್ಲಿ ಹೋಟೆಲ್ ರೂಂ ಬಾಡಿಗೆಗೆ ಪಡೆದು ಅಲ್ಲಿ ತಮ್ಮ ಮೊಬೈಲ್ ಪೋನುಗಳನ್ನು ಸ್ವಿಚ್ಡ್ ಆಫ್ ಮಾಡುತ್ತಿದ್ದರು. ಬಳಿಕ ಯಾವುದಾದರೂ ಸ್ಥಳಕ್ಕೆ ತೆರಳಿ ಬೀಗ ಜಡಿದ ಮನೆಗಳನ್ನು ವೀಕ್ಷಿಸಿ ಸಮೀಪದ ಮದ್ಯದಂಗಡಿಯಲ್ಲಿ ಕುಳಿತು ಮದ್ಯಸೇವಿಸಿ ರಾತ್ರಿ ಹೊತ್ತು ಮೊದಲೇ ನಿಗದಿ ಮಾಡಿದ ಮನೆ ಬಾಗಿಲು ಮುರಿದು ಕಳ್ಳತನ ನಡೆಸುತ್ತಿದ್ದರು. ಬಹುತೇಕ ಇವರು ಹೆದ್ದಾರಿ ಸಮೀಪದ ಮನೆಗಳನ್ನು ಗುರಿಯಾಗಿಸುತ್ತಿದ್ದರು. ತಾವು ಕದ್ದ ಚಿನ್ನಾಭರಣಗಳನ್ನು ಕೇರಳದಲ್ಲಿ ಮಾರಿ ಬಂದ ಹಣದಲ್ಲಿ ಶೋಕಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
2022ರ ಸೆ.17 ರಂದು ರಾತ್ರಿ ವೇಳೆಯಲ್ಲಿ ಕೋಟೆಶ್ವರ ಪ್ರಸನ್ನ ನಾರಾಯಣ ಆಚಾರ್ಯ ಎನ್ನುವವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣಗಳನ್ನು ಹಾಗೂ ನಗದು ಹಣವು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತಂಡ ರಚಿಸಿ ತನಿಖೆ ಕೈಗೊಂಡಿದ್ದರು.