ಎಪ್ರಿಲ್ ವರೆಗೆ ಸರಕಾರಿ ಶಾಲೆಯ ಮಧ್ಯಾಹ್ನದೂಟದಲ್ಲಿ ಚಿಕನ್, ಹಣ್ಣುಗಳನ್ನು ನೀಡಲಿರುವ ಪ.ಬಂ.ಸರಕಾರ

ಕೋಲ್ಕತಾ,ಜ.6: ಜನವರಿಯಿಂದ ಎಪ್ರಿಲ್ ವರೆಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಚಿಕನ್ ಮತ್ತು ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳನ್ನು ಒದಗಿಸಲು ಪಶ್ಚಿಮ ಬಂಗಾಳ ಸರಕಾರವು ನಿರ್ಧರಿಸಿದ್ದು, ಮಂಗಳವಾರ ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಪಂಚಾಯತ್ ಚುನಾವಣೆಗಳು ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು,ಈ ಹಿನ್ನೆಲೆಯಲ್ಲಿ ಮಧ್ಯಾಹ್ನದೂಟದ ಮೆನುವನ್ನು ಪರಿಷ್ಕರಿಸಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಹೇಳಿದೆ.
ಶಾಲಾ ಶಿಕ್ಷಣ ಇಲಾಖೆಯ ಅಧಿಸೂಚನೆಯಂತೆ ವಾರಕ್ಕೊಮ್ಮೆ ಚಿಕನ್ ಮತ್ತು ಹಣ್ಣುಗಳನ್ನು ಒದಗಿಸಲು 371 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಅನ್ನ,ಬೇಳೆಕಾಳುಗಳು, ತರಕಾರಿಗಳು,ಸೋಯಾಬೀನ್ ಮತ್ತು ಮೊಟ್ಟೆಗಳನ್ನೊಳಗೊಂಡಿರುವ ಮಧ್ಯಾಹ್ನದೂಟದ ಹಾಲಿ ಮೆನುವಿಗೆ ಹೆಚ್ಚುವರಿಯಾಗಿರಲಿದೆ.
ಈಗ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಎಂದು ಕರೆಯಲಾಗುತ್ತಿರುವ ಮಧ್ಯಾಹ್ನದೂಟ ಯೋಜನೆಯಲ್ಲಿ ದಾಖಲಾಗಿರುವ ಪ್ರತಿ ವಿದ್ಯಾರ್ಥಿಗೆ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಒದಗಿಸಲು ವಾರಕ್ಕೆ 20 ರೂ.ವೆಚ್ಚ ಮಾಡಲಾಗುವುದು ಮತ್ತು ಇದು 16 ವಾರಗಳ ಕಾಲ ಮುಂದುವರಿಯುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಪ.ಬಂಗಾಳದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 1.16 ಕೋ.ಗೂ ಅಧಿಕ ವಿದ್ಯಾರ್ಥಿಗಳು ಮಧ್ಯಾಹ್ನದೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು 60:40ರ ಅನುಪಾತದಲ್ಲಿ ಹಂಚಿಕೊಳ್ಳುತ್ತಿವೆ. ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿರುವ 371 ಕೋ.ರೂ.ಗಳ ಹೊರೆಯನ್ನು ಸಂಪೂರ್ಣವಾಗಿ ರಾಜ್ಯ ಸರಕಾರವೇ ಭರಿಸಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.







