ಭಾರತದ ಜಿಡಿಪಿ ಬೆಳವಣಿಗೆ ಶೇ.7ಕ್ಕೆ ಕುಸಿತ ಸಾಧ್ಯತೆ: ಕಾರಣವೇನು?

ಹೊಸದಿಲ್ಲಿ,ಜ.6: 2022-23ನೇ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಶೇ.ಲ7ಕ್ಕೆ ಕುಸಿಯುವ ಸಾಧ್ಯತೆಯಿದೆ. ಇದು 2021-22ನೇ ಸಾಲಿನಲ್ಲಿ ಇದ್ದ ಶೇ.8.7 ಜಿಡಿಪಿ ಬೆಳವಣಿಗೆಗಿಂತ ಕಡಿಮೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ತಿಳಿಸಿದೆ.
ಮಾರ್ಚ್ನಲ್ಲಿ ಕೊನೆಗೊಳ್ಳಲಿರುವ ಹಾಲಿ ವಿತ್ತೀಯ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯು ಮಂದಗತಿಯನ್ನು ಕಾಣಲಿದೆ ಎಂದು ಅದು ಹೇಳಿದೆ. ಗಣಿಗಾರಿಕೆ ಹಾಗೂ ಉತ್ಪಾದನಾ ವಲಯಗಳ ಕಳಪೆ ನಿರ್ವಹಣೆಯೇ ಇದಕ್ಕೆ ಕಾರಣವೆಂದು ತಿಳಿಸಿದೆ.
2022-23ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಸರಕಾರವು ಈ ಹಿಂದೆ ಅಂದಾಜಿಸಿದ್ದ ಶೇ.8- ಶೇ.8.5ಕ್ಕಿಂತ ಕಡಿಮೆಯಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ನ ಶೇ.6.8ರ ಮುನ್ನಂದಾಜಿಗಿಂತ ಜಿಡಿಪಿಯು ಅಧಿಕ ಬೆಳವಣಿಗೆಯನ್ನು ಕಂಡಿದೆ.
ಹಾಲಿ ವಿತ್ತೀಯ ವರ್ಷದಲ್ಲಿ ಉತ್ಪಾದನಾ ವಲಯದ ಬೆಳವಣಿಗೆ ಕಳೆದ ಸಾಲಿಗಿಂತ ಶೇ.1.6ರಷ್ಟು ಕುಂಠಿತಗೊಳ್ಳಲಿದೆ. 2021-22ನೇ ಸಾಲಿನಲ್ಲಿ ದೇಶವು ಉತ್ಪಾದನಾ ವಲಯದಲ್ಲಿ ಶೇ.9.9ರಷ್ಟು ವೃದ್ಧಿಯನ್ನು ಕಂಡಿತ್ತು. ಅದೇ ರೀತಿ ಗಣಿಗಾರಿಕಾ ವಲಯವು 2022-23ನೇ ಸಾಲಿನಲ್ಲಿ ಶೇ.2,.4ರಷ್ಟು ಬೆಳವಣಿಗೆಯನ್ನು ಕಾಣಲಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ ಗಣಿಗಾರಿಕೆಯು ಶೇ.11.5ರಷ್ಟು ಬೆಳವಣಿಗೆಯನ್ನು ಕಂಡಿತ್ತು.
ಆದರೂ, ಕೃಷಿ ವಲಯವು ಶೇ.3.5ರಷ್ಟು ಬೆಳವಣಿಗೆಯನ್ನು ಕಾಣಲಿದೆ. ವಾಣಿಜ್ಯ, ಹೊಟೇಲ್, ಸಾರಿಗೆ, ಸಂವಹನ ಹಾಗೂ ಪ್ರಸರಣ ವಲಯಕ್ಕೆ ಸಂಬಂಧಿಸಿ ಸೇವೆಗಳು ಬೆಳವಣಿಗೆ 2021-22ನೇ ಸಾಲಿನಲ್ಲಿ ಶೇ.11.1ರಷ್ಟಿದ್ದರೆ, ಈ ಸಾಲಿನಲ್ಲಿ ಅದು ಶೇ.13.7ರಷ್ಟು ಹೆಚ್ಚಳವಾಗಲಿದೆಯೆಂದು ಅಂದಾಜಿಸಲಾಗಿದೆ. ಉತ್ಪಾದನಾ ವಲಯದ ಬೆಳವಣಿಗೆಯು ಕಳೆದ ಸಾಲಿನಲ್ಲಿ 11.5ರಷ್ಟಿದ್ದರೆ, ಈ ಬಾರಿ ಶೇ.9.1ಕ್ಕೆ ಕುಂಠಿತಗೊಳ್ಳಲಿದೆ.
ಕೇಂದ್ರ ಸರಕಾರವು ಈ ಸುಧಾರಿತ ಅಂದಾಜುಗಳನ್ನು ನೂತನ ಬಜೆಟ್ ರಚನೆಗೆ ಬಳಸಿಕೊಳ್ಳುತ್ತದೆ. 2023-24ನೇ ಸಾಲಿನ ಬಜೆಟನ್ನು ಕೇಂದ್ರ ಸರಕಾರವು ಫೆಬ್ರವರಿ 1ರಂದು ಮಂಡಿಸಲಿದೆ.







