ಎಂ.ಬಿ. ಪಾಟೀಲರಿಗೆ ಬಬಲೇಶ್ವರ ಸುಲಭದ ತುತ್ತಾಗಲಿದೆಯೇ?

► ಸತತ ಗೆಲುವುಗಳ ಹಿನ್ನೆಲೆ, ನೀರಾವರಿ ಯೋಜನೆಗಳೇ ಬಲವಾಗಲಿವೆಯೇ? ಕಾಂಗ್ರೆಸ್‌ನ ಎಂ.ಬಿ.ಪಾಟೀಲರಿಗೆ ಈ ಅಖಾಡದಲ್ಲಿ ಎದುರಾಳಿಗಳೇ ಇಲ್ಲವೇ?
► ಒಳಜಗಳದಲ್ಲಿಯೇ ಸೊರಗಿರುವ ಬಿಜೆಪಿಯಿಂದ ಸ್ಪರ್ಧಿಸುತ್ತಾರಾ ಹೊಸಬರು? ಜೆಡಿಎಸ್ ಲೆಕ್ಕಕ್ಕಿಲ್ಲದ ಬಬಲೇಶ್ವರದಲ್ಲಿ ಹೇಗಿರಲಿದೆ ಕೈ-ಕಮಲ ಪೈಪೋಟಿ?
ಎಂ.ಬಿ. ಪಾಟೀಲ್
ಎಂ.ಬಿ.ಪಾಟೀಲ್. ಪ್ರಭಾವಿ ಲಿಂಗಾಯತ ರಾಜಕಾರಣಿ. ಇವರು ರಾಜಕಾರಣಿ ಹಾಗೂ ಶಿಕ್ಷಣ ತಜ್ಞ ದಿ. ಬಿ.ಎಂ. ಪಾಟೀಲರ ಹಿರಿಯ ಪುತ್ರ. ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. ಒಂದು ಬಾರಿ ಲೋಕಸಭಾ ಸದಸ್ಯರು, 5 ಸಲ ವಿಧಾನಸಭಾ ಸದಸ್ಯರಾಗಿದ್ದಾರೆ. ಎಂ.ಬಿ. ಪಾಟೀಲರು 1991ರಲ್ಲಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013ರಲ್ಲಿ ಸಿದ್ದರಾಮಯ್ಯನವರ ಕ್ಯಾಬಿನೆಟ್‌ನಲ್ಲಿ ನೀರಾವರಿ ಸಚಿವರಾಗಿ ಯಶಸ್ಸು ಕಂಡರು. ಮುಂದೆ ಇವರ ಜಾಣ ನಡೆ ಕರ್ನಾಟಕದ ನೀರಾವರಿ ಸಚಿವರಾಗಿ ಅವರ ಕೆಲಸಗಳು ಕರ್ನಾಟಕದಾದ್ಯಂತ ಸ್ಥಗಿತಗೊಂಡಿರುವ ವಿವಿಧ ನೀರಾವರಿ ಯೋಜನೆಗಳಿಗೆ ಹೊಸ ಜೀವವನ್ನು ನೀಡಿತು.
2018ರ ಡಿಸೆಂಬರ್‌ನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರಕಾರದಲ್ಲಿ ಗೃಹ ಖಾತೆ ನೀಡಲಾಗಿತ್ತು. ಇಲ್ಲಿಯೂ ಪಾಟೀಲರು ತಮ್ಮ ಚಾಣಾಕ್ಷ ಕೆಲಸದಿಂದ ಹೆಜ್ಜೆಗುರುತು ಮೂಡಿಸಿದರು. ಪ್ರಬಲ ಲಿಂಗಾಯತ ಸಮುದಾಯದಿಂದ ಬಂದಿರುವ ಅವರು ಭವಿಷ್ಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರೆಂದು ಪರಿಗಣಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರದೊಳಗೆ ವಿಲೀನವಾಯಿತು. ಈ ಎರಡೂ ಕ್ಷೇತ್ರಗಳಲ್ಲಿ ದಿ. ಬಿ.ಎಂ. ಪಾಟೀಲ್ ಹಾಗೂ ಅವರ ಪುತ್ರ ಎಂ.ಬಿ. ಪಾಟೀಲ್ ಅವರು ಜನತೆಯ ಆಶೀರ್ವಾದ ಪಡೆಯುತ್ತಲೇ ಬಂದಿದ್ದಾರೆ. ತಂದೆ-ಮಗ ಇಬ್ಬರೂ ಸಚಿವರಾದುದು ವಿಶೇಷ. ಕ್ಷೇತ್ರ ವಿಂಗಡಣೆ ಬಳಿಕ ಸತತ ಮೂರು ಚುನಾವಣೆಗಳಲ್ಲಿಯೂ ಎಂ.ಬಿ. ಪಾಟೀಲ್ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ‘ಪಾಟೀಲರು’ ಬೇರೆ ಬೇರೆ ಉಪನಾಮ ಹೊಂದಿರುವ ವ್ಯಕ್ತಿಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಪಾಟೀಲ್ ಹೆಸರಿನ 17 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ ಆರು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ಮೂವರು ಗೆದ್ದಿದ್ದರು. ವಿಜೇತರಾದ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ಕಾಂಗ್ರೆಸ್‌ನವರಾದರೆ, ಬಸನಗೌಡ ಪಾಟೀಲ್ ಯತ್ನಾಳ್, ಎ.ಎಸ್. ಪಾಟೀಲ್ ನಡಹಳ್ಳಿ ಮತ್ತು ಸೋಮನಗೌಡ ಪಾಟೀಲ್ ಸಸ್ನೂರ್ ಬಿಜೆಪಿಯವರು.
ಎಂ.ಬಿ. ಪಾಟೀಲ್ ಬಬಲೇಶ್ವರ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ್ ವಿರುದ್ಧ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಇದರ ಹಿಂದಿನ ಚುನಾವಣೆಯಲ್ಲಿ ಎಂ.ಬಿ. ಪಾಟೀಲ್ 4 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ನೀರಾವರಿ ಸಚಿವರಾಗಿ ತಮ್ಮ ಕ್ಷೇತ್ರದಲ್ಲಿ ಜಾರಿಗೊಳಿಸಿದ ನೀರಾವರಿ ಯೋಜನೆಗಳಿಂದಾಗಿ ಈ ಬಾರಿ ಅವರ ಗೆಲುವಿನ ಅಂತರ ತೀವ್ರವಾಗಿ ಏರಿತು. ವಿಜುಗೌಡ ಪಾಟೀಲ್ ಅವರಿಗೆ ಸತತ ಮೂರನೇ ಬಾರಿಗೆ ಸೋಲಾಗಿತ್ತು.
2018ರಲ್ಲಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲ್ 98,339 ಮತಗಳನ್ನು ಪಡೆದರೆ, ಬಿಜೆಪಿಯ ವಿಜುಗೌಡ ಎಸ್. ಪಾಟೀಲ್ 68,624 ಮತ ಗಳಿಸಿದ್ದರು. ಎಂ.ಬಿ. ಪಾಟೀಲ್ 29,715 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದರು. ಜೆಡಿಎಸ್ ಹಾಗೂ ಪಕ್ಷೇತರರು ಲೆಕ್ಕಕ್ಕೇ ಇರಲಿಲ್ಲ.
2013ರಲ್ಲಿ ಎಂ.ಬಿ. ಪಾಟೀಲ್ 62,061 ಮತಗಳನ್ನು ಅಂದರೆ ಶೇ.46.19ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಿಜುಗೌಡ ಪಾಟೀಲ್ 57,706 ಮತಗಳು ಅಂದರೆ ಶೇ. 42.95ರಷ್ಟು ಮತಗಳನ್ನು ಪಡೆದರು.
2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲ್ 55,525 ಮತಗಳನ್ನು ಪಡೆದು ಗೆದ್ದಿದ್ದರು. ಜೆಡಿಎಸ್‌ನ ವಿಜುಗೌಡ ಪಾಟೀಲ್ 38,886 ಮತಗಳನ್ನು ಪಡೆದು ಸೋತಿದ್ದರು.
ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದ ವಿಜುಗೌಡ ಪಾಟೀಲರು ಆನಂತರ ಬಿಜೆಪಿ ಸೇರಿ ಬಿಜೆಪಿಯಿಂದ ಸ್ಪರ್ಧಿಸಿದರೂ ಎಂ.ಬಿ. ಪಾಟೀಲರನ್ನು ಮಣಿಸಲು ಆಗಲೇ ಇಲ್ಲ.
ತಮ್ಮ 27ನೇ ವಯಸ್ಸಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಎಂ.ಬಿ. ಪಾಟೀಲ್ ಮುಂದೆ ಲೋಕಸಭಾ ಸದಸ್ಯರಾಗಿಯೂ ಆಯ್ಕೆ ಆಗಿದ್ದರು.
2008, 2013, 2018ರಲ್ಲಿ ಸತತ ಮೂರು ಬಾರಿ ವಿಜಯಪುರದ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ಪಾಟೀಲ್‌ಗೆ ಸಚಿವ ಸ್ಥಾನದ ಜವಾಬ್ದಾರಿ ವಹಿಸಿರುವ ಅನುಭವವೂ ಇದೆ. ಉದ್ಯಮಿಯೂ ಆಗಿರುವ ಇವರು ವಿಜಯಪುರ ಭಾಗದಲ್ಲಿ ಪ್ರಭಾವಿ ಧುರೀಣರಾಗಿ ಗುರುತಿಸಿಕೊಂಡಿದ್ದಾರೆ.
ಪ್ರಬಲ ಲಿಂಗಾಯತ ಸಮಾಜದ ನಾಯಕರಾಗಿರುವ ಇವರನ್ನು 2022ರಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ನೀರಾವರಿ ಯೋಜನೆಗಳ ಮೂಲಕ ಜನಪ್ರಿಯತೆ ಪಡೆದಿರುವ ಎಂ.ಬಿ. ಪಾಟೀಲ್ ಅವರಿಗೆ ಅದೇ ದೊಡ್ಡ ಬಲವೂ ಹೌದು. ನೀರಾವರಿ ಯೋಜನೆಗಳ ಬಗ್ಗೆ ತಿಳುವಳಿಕೆಯುಳ್ಳವರು ಎಂಬುದರ ಜೊತೆಗೇ ರಾಜಕೀಯ ತಿಳುವಳಿಕೆ ಮತ್ತು ಪ್ರಭಾವಿ ಎಂಬುದು ಕೂಡ ಅವರ ಪ್ಲಸ್ ಪಾಯಿಂಟ್ ಅಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ತರಲಿದೆ ಎಂದು ಕೂಡ ಎಂ.ಬಿ. ಪಾಟೀಲ್ ಹೇಳುತ್ತಿದ್ದಾರೆ. ನೂತನ ಪಿಂಚಣಿ ಯೋಜನೆಯು ನಿವೃತ್ತಿಯ ನಂತರ ಯಾವುದೇ ಆರ್ಥಿಕ ಭದ್ರತೆಯನ್ನು ನೀಡುವುದಿಲ್ಲ. 2023ರವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತೇವೆಂದು ಹೇಳಿರುವುದು ಮಹತ್ವ ಪಡೆಯಲಿದೆ. ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಗೆಲುವಿಗೂ ಇದು ಮೂಲ ಮಂತ್ರವಾಯಿತೆಂಬುದನ್ನು ಗಮನಿಸಬೇಕು.
ಎಂ.ಬಿ. ಪಾಟೀಲರಿಗೆ ಪ್ರಬಲ ಎದುರಾಳಿಗಳೇ ಇಲ್ಲ ಎಂದೇ ಹೇಳಲಾಗುತ್ತಿದೆ. ತಮ್ಮ ಕ್ಷೇತ್ರ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿಯೇ ಅವರು ಪ್ರಭಾವಿ ಎಂಬುದೂ ಇದಕ್ಕೆ ಕಾರಣ.
► ಬಿಜೆಪಿಯಲ್ಲಿ ಕಚ್ಚಾಟ
ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಆಂತರಿಕ ಕಚ್ಚಾಟವೇ ಅದಕ್ಕೆ ದೊಡ್ಡ ಹೊಡೆತ ಕೊಡಲಿದೆ ಎನ್ನಲಾಗುತ್ತಿದೆ. ಈಗ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆಯೂ ಒಮ್ಮತ ಮೂಡಿಲ್ಲ. ವಿಜುಗೌಡ ಪಾಟೀಲರು ಈಗಾಗಲೇ ಜೆಡಿಎಸ್‌ನಿಂದ 2 ಮತ್ತು ಬಿಜೆಪಿಯಿಂದ ಒಮ್ಮೆ ಒಟ್ಟು ಮೂರು ಬಾರಿ ಎಂಬಿ ಪಾಟೀಲ್ ವಿರುದ್ಧ ಸೋತಿರುವುದರಿಂದ ಈ ಬಾರಿ ಅವರಿಗೆ ಟಿಕೆಟ್ ಬೇಡ ಎಂದೂ ಬಿಜೆಪಿಯ ಒಂದು ಬಣ ಒತ್ತಾಯಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ವಿಜುಗೌಡ ಪಾಟೀಲ್ ಬದಲಿಗೆ ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ್ ಕೋಳಕೂರ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಕೋಳಕೂರ ಕೂಡ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಆದರೆ ವಿಜುಗೌಡ ಪಾಟೀಲ್ ಅವರು ತನ್ನನ್ನು ಪಕ್ಷ ಕೈಬಿಡಲಾರದು ಎಂಬ ಭರವಸೆಯಲ್ಲಿಯೇ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.







