ಚೀನಾ ಸರ್ಕಾರದ ದಾಳಿಯ ನಂತರ ಆ್ಯಂಟ್ ಸಮೂಹದ ನಿಯಂತ್ರಣ ತ್ಯಜಿಸಿದ ಜಾಕ್ ಮಾ

ಹಾಂಗ್ ಕಾಂಗ್: ಚೀನಾ ಸರ್ಕಾರದ ನಿಯಂತ್ರಣ ಪ್ರಾಧಿಕಾರವೊಂದರ ದಾಳಿಯ ಕಾರಣಕ್ಕೆ 37 ಶತಕೋಟಿ ಡಾಲರ್ ಮೌಲ್ಯದ ಐಪಿಒ ನಷ್ಟ ಅನುಭವಿಸಿದ್ದ ಆ್ಯಂಟ್ ಸಮೂಹದ (Ant Group) ನಿಯಂತ್ರಣವನ್ನು ಕೈಬಿಡಲು ಆ ಸಮೂಹದ ಸಂಸ್ಥಾಪಕ ಜಾಕ್ ಮಾ (Jack Ma) ನಿರ್ಧರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಚೀನಾ ಮೂಲದ ಸೂಕ್ಷ್ಮ ತಂತ್ರಜ್ಞಾನ ಕ್ಷೇತ್ರದ ದೈತ್ಯರಾಗಿರುವ ಜಾಕ್ ಮಾ ಅವರು ಆ್ಯಂಟ್ ಸಮೂಹದ ಮೇಲೆ ಹೊಂದಿದ್ದ ಮತದಾನದ ಹಕ್ಕು ಸೇರಿದಂತೆ ಹಲವಾರು ನಿಯಂತ್ರಣಗಳನ್ನು ತ್ಯಜಿಸಲು ಅನುಕೂಲವಾಗುವಂತೆ ಕಂಪನಿಯ ಶೇರುದಾರರು ಸರಣಿಯೋಪಾದಿ ಬದಲಾವಣೆ ಕೈಗೊಳ್ಳಲು ಸಮ್ಮತಿಸಿದ್ದಾರೆ ಎಂದು ಶನಿವಾರ ಸಮೂಹವು ಪ್ರಕಟಿಸಿದೆ.
ಚೀನಾ ಸರ್ಕಾರದ ನಿಯಂತ್ರಣ ಪ್ರಾಧಿಕಾರ ದಾಳಿಯಿಂದ ಅನುಭವಿಸಿದ ನಷ್ಟದ ಕಾರಣಕ್ಕೆ ಆ್ಯಂಟ್ ಸಮೂಹವು ತನ್ನ ಬೃಹತ್ ಆರ್ಥಿಕ ತಂತ್ರಜ್ಞಾನವನ್ನು ಮರುರೂಪಿಸಿಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗಿತ್ತು. ಇದಾದ ನಂತರ ಆ್ಯಂಟ್ ಸಮೂಹದಿಂದ ಜಾಕ್ ಮಾ ಅವರ ನಿರ್ಗಮನವನ್ನು ದೊಡ್ಡ ಬೆಳವಣಿಗೆ ಎಂದೇ ಉದ್ಯಮ ವಲಯದಲ್ಲಿ ಬಣ್ಣಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಓರಿಯಂಟ್ ಕ್ಯಾಪಿಟಲ್ ರಿಸರ್ಚ್ ವ್ಯವಸ್ಥಾಪಕ ನಿರ್ದೇಶಕ ಆ್ಯಂಡ್ರೆ ಕಾಲಿಯರ್, "ತಾವು ಸ್ಥಾಪಿಸಿದ ಆ್ಯಂಟ್ ಸಂಸ್ಥೆಯಿಂದ ಜಾಕ್ ಮಾ ನಿರ್ಗಮಿಸಿರುವುದು ಬೃಹತ್ ಖಾಸಗಿ ಹೂಡಿಕೆದಾರರ ಪ್ರಭಾವವನ್ನು ತಗ್ಗಿಸುವ ಚೀನಾ ನಾಯಕತ್ವದ ದೃಢ ನಿರ್ಧಾರವನ್ನು ತೋರಿಸುತ್ತದೆ. ಈ ಬೆಳವಣಿಗೆಯಿಂದ ಚೀನಾ ಆರ್ಥಿಕತೆಯ ಬಹುತೇಕ ಉತ್ಪಾದನಾ ವಲಯಗಳು ನಶಿಸುವುದು ಮುಂದುವರಿಯಲಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಅಧಿಕೃತ ಹೇಳಿಕೆಯ ಹೊರತಾಗಿಯೂ, ಆ್ಯಂಟ್ ಸಂಸ್ಥೆಯು ಆರ್ಥಿಕ ವ್ಯವಸ್ಥೆಗೆ ಕೊಂಚ ಮಟ್ಟಿನ ಸಮಸ್ಯೆ ಉಂಟು ಮಾಡಲಿದೆ. ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಿದ್ದ ಸಣ್ಣ ವ್ಯಾಪಾರೋದ್ಯಮಗಳಿಗೆ ಅದು ಸಾಲ ಸೌಲಭ್ಯ ಒದಗಿಸುವ ಸಾಮರ್ಥ್ಯ ಹೊಂದಿತ್ತು" ಎಂದೂ ಅವರು ಹೇಳಿದ್ದಾರೆ.
"ಜಾಕ್ ಮಾ ಇನ್ನು ಮುಂದೆ ಆ್ಯಂಟ್ ಸಮೂಹದ ನಿಯಂತ್ರಕ ಶೇರುದಾರರಾಗಿರುವುದಿಲ್ಲ ಎಂಬುದು ನಿಜಕ್ಕೂ ಗಮನಾರ್ಹ ಸಂಗತಿಯಾಗಿದೆ. ಒಟ್ಟಾರೆ ಅಭಿಪ್ರಾಯದಲ್ಲಿ ಇದರಿಂದ ಐಪಿಒ ಸ್ವಾಧೀನಕ್ಕೆ ದಾರಿಯಾಗಬೇಕು ಮತ್ತು ಕಣ್ತಪ್ಪು/ದತ್ತಾಂಶದ ಮಾಲಕತ್ವದಂತಹ ಪ್ರಮುಖ ಸಮಸ್ಯೆಗಳೂ ಕೂಡಾ ಬಗೆಹರಿಯಲಿವೆ" ಎಂದು ಬೀಜಿಂಗ್ ಮೂಲದ ಹೂಡಿಕೆ ಸಲಹಾ ಸಂಸ್ಥೆ ಬಿಡಿಎ ಅಧ್ಯಕ್ಷ ಡಂಕನ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.