ಪುತ್ತೂರು: ಎಪಿಎಂಸಿ ಸಂಪರ್ಕದ ರೈಲ್ವೇ ಕೆಳ ರಸ್ತೆ ನಿರ್ಮಾಣ; ಭರದಿಂದ ಸಾಗಿದ ಕಾಮಗಾರಿ

ಪುತ್ತೂರು: ಪುತ್ತೂರಿನ ಜನರ ಬಹುಕಾಲದ ಬೇಡಿಕೆಯಾಗಿರುವ ಪುತ್ತೂರಿನ ಎಪಿಎಂಸಿ ಸಂಪರ್ಕದ ರೈಲ್ವೇ ಕೆಳ ಸೇತುವೆ ರಸ್ತೆ ನಿರ್ಮಾಣ ಕಾಮಗಾರಿಯು ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದು, ಶನಿವಾರ ರೈಲ್ವೇ ಸಂಚಾರ ಸ್ಥಗಿತಗೊಳಿಸಿ ಹಳಿಯನ್ನು ತೆರವುಗೊಳಿಸಿ ಭರದಿಂದ ಕಾಮಗಾರಿ ನಡೆಸಲಾಯಿತು.
ಶನಿವಾರ ಬೆಳಗ್ಗೆ 6 ಘಂಟೆಯಿಂದ ಮದ್ಯಾಹ್ನ 2 ಗಂಟೆಯ ತನಕ ರೈಲು ಓಡಾಟ ಈ ಭಾಗದಲ್ಲಿ ಸ್ಥಗಿತಗೊಳಿಸಿ, ಹಳಿ ಜೋಡಿಸುವ ಕಾಮಗಾರಕಿ ನಡೆಸಲಾಗಿತ್ತು. ರೂ. 13 ಕೋಟಿ ವೆಚ್ಚದಲ್ಲಿ ನೂತನ ಸಂಪರ್ಕ ರಸ್ತೆ ಮತ್ತು ಕೆಳ ಸೇತುವೆ ಇಲ್ಲಿ ನಿರ್ಮಾಣವಾಗುತ್ತಿದೆ. ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು, ಮಂಗಳೂರು- ಬೆಂಗಳೂರು ಪ್ಯಾಸೆಂಜರ್‍ರೈಲು ಸೇರಿದಂತೆ ಹಲವು ಗೂಡ್ಸ್ ರೈಲುಗಳ ಸೇವೆಯನ್ನು ಮದ್ಯಾಹ್ನದ ತನಕ ರದ್ದುಪಡಿಸಿ ರದ್ದುಪಡಿಸಿ, ಸಮಯ ಮರು ಹೊಂದಾಣಿಕೆ ಮಾಡಿಕೊಳ್ಳಲಾಯಿತು.
ಈಗಾಗಲೆ ರೈಲ್ವೇ ಕೆಳ ಸೇತುವೆ ಸಂಪರ್ಕದ ರಸ್ತೆ ನಿರ್ಮಿಸಲಾಗುತ್ತಿದ್ದು, ಪುತ್ತೂರು ನಗರದ ಕಡೆಯಿಂದ ತೆರಳುವ ಎಪಿಎಂಸಿ ರಸ್ತೆಯಲ್ಲಿ ರೈಲ್ವೆ ಹಳಿಯ ಬುಡದಲ್ಲಿ ಬಲಕ್ಕೆ ಹೊಸ ರಸ್ತೆ ನಿರ್ಮಿಸಲಾಗಿದೆ. ಅದು ಹಳಿಯ ಪೂರ್ವ ದಿಕ್ಕಿನಲ್ಲಿ ಹಾದು ಸೂತ್ರಬೆಟ್ಟು ರಸ್ತೆಯನ್ನು ಸೇರಿ ಅಲ್ಲಿಂದ ಸಾಲ್ಮರ- ಕೇಪುಳು ಮೂಲಕ ಪುತ್ತೂರು ಉಪ್ಪಿನಂಗಡಿ ಮುಖ್ಯರಸ್ತೆಗೆ ಸೇರುತ್ತದೆ. ಹೊಸ ರಸ್ತೆಯ ನಿರ್ಮಾಣ ಕಾಮಗಾರಿ ಬಹುತೇಕ ನಡೆಸಲಾಗಿದೆ.
ರಸ್ತೆ ಪಕ್ಕದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ರೈಲು ಹಾದು ಹೋಗುವ ಹಳಿಯ ಅಡಿ ಭಾಗದಲ್ಲಿ ಅಂಡರ್ ಪಾಸ್ ಗಾಗಿ ಮಣ್ಣು ಅಗೆದು ವಿಶಾಲ ಮಾರ್ಗ ರಚಿಸಲಾಗಿದೆ. ಚತುಷ್ಪಥ ರಸ್ತೆಗೆ ಬೇಕಾಗುವಷ್ಟು ಅಗಲಕ್ಕೆ ಸಿವಿಲ್ ಕಾರ್ಯ ನಡೆಸಲಾಗಿದೆ. ಮುಂದಿನ ಹಂತದಲ್ಲಿ ರಸ್ತೆ ಡಾಮರೀಕರಣ ಕಾರ್ಯ ನಡೆಯಬೇಕಾಗಿದೆ.
ಶಾಸಕರಿಂದ ಭೇಟಿ, ಪರಿಶೀಲನೆ
ಶನಿವಾರ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ರೈಲ್ವೇ ಕೆಳ ಸೇತುವೆ ನಿರ್ಮಾಣವು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. 2022ರ ಮೇ 21ರಂದು ಮಾಜಿ ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್‍ಕುಮಾರ್ ಕಟೀಲ್, ಶಾಸಕ ಅಂಗಾರ ಅವರು ಕಾಮಗಾರಿಗೆ ಶಿಲನ್ಯಾಸ ನಡೆಸಿದ್ದರು. ಬಳಿಕ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಬಹುತೇಕ ವೇಗವಾಗಿ ನಡೆಯುತ್ತಿದ್ದು, ಮುಂದಿನ 2 ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ರೈಲ್ವೇ ಸಂಪರ್ಕ ರಸ್ತೆಯು ಜನ ಹಾಗೂ ವಾಹನ ದಟ್ಟಣೆಯ ರಸ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದೆ. ಪಾಸ್ ಸಂಪರ್ಕ ರಸ್ತೆಯ ಒಂದು ಭಾಗದಲ್ಲಿ ಚತುಷ್ಪಥ ನಿರ್ಮಾಣಕ್ಕೆ ಪಕ್ಕದ ಖಾಸಗಿ ಜಮೀನು ಅಡ್ಡ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗದ ಸರ್ವೆ ನಡೆಸಿ ಮುಂದಿನ ಕ್ರಮ ಜರುಗಿಸಲು ಕಂದಾಯ ಇಲಾಖೆಗೆ ತಿಳಿಸಿ, ಜಮೀನು ಒತ್ತುವರಿ ಸಂಬಂಧ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.
2022ರ ಮೇ 21ರಂದು ಅಂಡರ್ ಪಾಸ್ ಯೋಜನೆಗೆ ಶಿಲಾನ್ಯಾಸ ಮಾಡಲಾಗಿದ್ದು, ತಾಂತ್ರಿಕ ಕ್ರಮಗಳು ಮುಗಿದ ಬಳಿಕ ಬೆಂಗಳೂರಿನ ಶ್ರೀನಿವಾಸುಲು ರೆಡ್ಡಿ ಮಾಲೀಕತ್ವದ ಎಸ್.ವಿ. ಕನ್‍ಸ್ಟ್ರಕ್ಞನ್ ಗುತ್ತಿಗೆದಾರ ಸಂಸ್ಥೆ ನವೆಂಬರ್‍ನಲ್ಲಿ ಕೆಲಸ ಆರಂಭಿಸಿತ್ತು. ಡಿಸೆಂಬರ್ ನಲ್ಲಿ ಮೊದಲ ಹಂತದ ಹಳಿ ಮರು ಜೋಡಣೆ ಕಾಮಗಾರಿ ನಡೆಸಲಾಗಿದ್ದು, ಇದೀಗ ಶನಿವಾರ 2ನೇ ಹಂತ ಪೂರೈಸಲಾಗಿದೆ. ಮುಂಜಾನೆ ಮೆಗಾ ಕ್ರೇನ್‍ಗಳ ಸಹಾಯದಿಂದ ಹಳಿ ತೆರವು ಮಾಡಿ, ಅಗತ್ಯಕ್ಕೆ ತಕ್ಕಂತೆ ರಸ್ತೆ ಅಗಲೀಕರಣ ಮಾಡಿ ಮಧ್ಯಾಹ್ನದ ಹೊತ್ತಿಗೆ ಹಳಿ ಮರು ಜೋಡಣೆ ಮಾಡಲಾಯಿತು. ಇದರ ಬೆನ್ನಲ್ಲೇ ರೈಲು ಓಡಾಟ ನಡೆಯಲಿದೆ. ಫೆಬ್ರುವರಿಯಲ್ಲಿ 3ನೇ ಮತ್ತು ಕೊನೆಯ ಹಂತದ ಕೆಲಸಕ್ಕಾಗಿ ಇದೇ ರೀತಿ ಅರ್ಧ ದಿನ ರೈಲು ಓಡಾಟ ಸ್ಥಗಿತಗೊಳಿಸಿ ಕೆಲಸ ಮಾಡಲಾಗುವುದು ಎಂದು ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ಸೀನಿಯರ್ ಎಂಜಿನಿಯರ್ ರವಿಚಂದ್ರ ಹೇಳಿದರು.
ಫೆಬ್ರುವರಿ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ ಎಂದು ಗುತ್ತಿಗೆದಾರ ಶ್ರೀನಿವಾಸುಲು ರೆಡ್ಡಿ ತಿಳಿಸಿದರು.
ಶಾಸಕರ ಭೇಟಿ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಕೆ.ಜೀವಂಧರ ಜೈನ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಸೀಲ್ದಾರ್ ನಿಸರ್ಗಪ್ರಿಯಾ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ನಗರ ಮಂಡಳ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರ ತಂಡ ಶನಿವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಉಪಸ್ಥಿತರಿದ್ದರು.