ಪುತ್ತೂರು ಬಂಟರ ಭವನದಲ್ಲಿ ತುಳುವೆರೆ ಮೇಳೊ-2023: ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಮಠಂದೂರು

ಪುತ್ತೂರು: ಭಾಷೆಯು ಸಮಾಜದ ಮತ್ತು ಜನಾಂಗದ ಸಂಸ್ಕೃತಿಯ ಬೆಸುಗೆ ಮಾಡುವ ಮಹತ್ವದ ಕೆಲಸವನ್ನು ಮಾಡುತ್ತಿದ್ದು, ಭಾಷೆಗೆ ತನ್ನದೇ ಆದ ಮಹತ್ವವಿದೆ. ತುಳು ಭಾಷೆಯನ್ನು ಸಂವಿಂಧಾನದ 8ನೇ ಪರಿಚ್ಛೇದಲ್ಲಿ ಸೇರಿಸುವ ಎಲ್ಲಾ ಪ್ರಯತ್ನಗಳು ಮುಂದಿನ ದಿನಗಳಲ್ಲಿ ನಡೆಯಲಿವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರ ಪುತ್ತೂರಿನ ಬಂಟರ ಭವನದಲ್ಲಿ ಪುತ್ತೂರು ತುಳುಕೂಟದ ಸುವರ್ಣ ಮಹೋತ್ಸವ ಹಾಗೂ ತಾಲೂಕು ತುಳುವೆರೆ ಮೇಳೊ-2023 ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ, ಕಳಸೆಗೆ ಭತ್ತ ತುಂಬುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯ ಕುರಿತು ಜಗತ್ತಿಗೆ ತಿಳಿಸಲು ಇಂತಹಾ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಮೂಲಕ ಇತರ ಭಾಷೆಯೊಂದಿಗೆ ತುಳು ಭಾಷೆಯನ್ನು ಪರಿಚಯಿಸುವ ಹಾಗೂ ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ, ತುಳುನಾಡಿನ ಸೃಷ್ಟಿ ತುಳುಭಾಷೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ. ತುಳುನಾಡಿದ ಆಚರಣೆಗಳಾದ ನಾಗಾರಾಧನೆ, ಭೂತಾರಾಧನೆ, ಕಂಬಳ ಮುಂತಾದ ಕ್ರೀಡೆಗಳು ತುಳು ಸಂಸ್ಕøತಿಯ ಒಂದು ಛಾಯೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ತುಳವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಸಂಸ್ಕೃತಿ, ಸಂಸ್ಕಾರ ಇದ್ದು, ತುಳು ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದರು.
ತುಳುವೆರೆ ಮೇಳೋ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ತುಳುಭಾಷೆ ದ.ಕ., ಉಡುಪಿಯಲ್ಲಿ ಭಾರೀ ಪ್ರಾಮುಖ್ಯತೆ ಪಡೆದಿದೆ. ಪುತ್ತೂರಿನಲ್ಲಿ ತುಳುಕೂಟದಂತಹ ಕಾರ್ಯಕ್ರಮದ ಮೂಲಕ ಸಂಘಟನೆ ಮಾಡಲಾಗಿದೆ. ತುಳು ಭಾಷೆಯ ಮೂಲಕ ಎಲ್ಲಾ ಜಾತಿ ಮತ್ತು ಧರ್ಮದವರು ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಿ ಬಾಳುವಂತಾಗಲಿ ಎಂದು ಹಾರೈಸಿದರು.
ಪುತ್ತೂರು ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಂಪ್ಯ ಅಕ್ಷಯ ಕಾಲೇಜು ನಿರ್ದೇಶಕ ಜಯಂತ ನಡುಬೈಲು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಲತಾ ರಾವ್, ಡಾ.ಪ್ರದೀಪ್ ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತುಳುವೆರೆ ಮೇಳೊ ಸಮಿತಿ ಕೋಶಾಧಿಕಾರಿ ರವಿಪ್ರಸಾದ್ ಬಿ.ವಿ., ಉಪಾಧ್ಯಕ್ಷೆ ಹೀರಾ ಉದಯ್, ಸಹಕಾರ್ಯದರ್ಶಿ ಉಲ್ಲಾಸ್ ಪೈ, ಸಂತೋಷ್ ಶೆಟ್ಟಿ, ನಯನಾ ರೈ ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತುಳುಕೂಟದ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕವಿಗೋಷ್ಠಿ, ಸಂವಾದ, ವಿಚಾರಗೋಷ್ಠಿಗಳು ನಡೆಯಿತು.