ಶೇ.65ರಷ್ಟು ಕನ್ನಡ ಶಬ್ದ ಸಂಸ್ಕೃತದಿಂದಲೇ ಬಂದಿವೆ: ಎಸ್.ಎಲ್. ಭೈರಪ್ಪ

ಹಾವೇರಿ: ಕನ್ನಡ ಶಬ್ದ ಕೋಶದ ಶೇ.65ರಷ್ಟು ಶಬ್ದಗಳು ಸಂಸ್ಕೃತದಿಂದಲೇ ಬಂದಿವೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ (SL Bhyrappa) ಪ್ರತಿಪಾದಿಸಿದ್ದಾರೆ.
ಹಾವೇರಿ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಶನಿವಾರ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ‘ಭಾರತ ಜನನಿಯ ತನ್ಮಜಾತೆ ಜಯಹೇ ಕರ್ನಾಟಕ ಮಾತೆ’ ಕುರಿತು ವಿಶೇಷ ಉಪನ್ಯಾಸದಲ್ಲಿ ಭೈರಪ್ಪ ಅವರ ಮಾತುಗಳನ್ನು ಪತ್ರದ ಮೂಲಕ ಸಾಹಿತಿ ಡಾ.ಪ್ರಧಾನ ಗುರುದತ್ತ ಉಲ್ಲೇಖಿಸಿದರು.
ಭಾರತ ದೇಶದ ಭಾಷೆಗಳ ಶಬ್ದಕೋಶ ಮಾತ್ರವಲ್ಲ, ವ್ಯಾಕರಣ ಪ್ರಕ್ರಿಯೆಯೂ ಮೂಲತಃ ಸಂಸ್ಕೃತದ ವ್ಯಾಕರಣವನ್ನೆ ಆಶ್ರಯಿಸಿದೆ. ಅದರಲ್ಲೂ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳನ್ನೆ ತೆಗೆದುಕೊಂಡರೂ, ಕನ್ನಡ ಶಬ್ದಕೋಶದ ಶೇ.65ರಷ್ಟು ಶಬ್ದಗಳು ಸಂಸ್ಕೃತದಿಂದಲೇ ಬಂದಿವೆ ಎಂದು ಹೇಳಿದರು.
ಇನ್ನು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಶೇಕಡವಾರು ಪ್ರಮಾಣ 70ರಿಂದ 75ರಷ್ಟು ಆಗಿದ್ದು, ತಮಿಳಿನಲ್ಲಿ ಈ ಪ್ರಮಾಣ ತುಂಬಾ ಕಡಿಮೆಯಾಗಿದ್ದು, ಅಲ್ಲಿ, ಶೇ.15ರಿಂದ 20ರಷ್ಟು ಮಾತ್ರ ಸಂಸ್ಕೃತದಿಂದ ಬಂದಿದೆ ಎಂದು ಭಾಷಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.
ಮೊದಲ ಹಂತದಲ್ಲಿ ದೇಶ ಭಾಷೆಗಳ ಸಾಹಿತ್ಯ ಸಮೃದ್ಧಿಗೆ ಸಂಸ್ಕೃತ ಕಾರಣವಾಗಿದ್ದರೆ, ಎರಡನೆ ಹಂತದಲ್ಲಿ ಸಂಸ್ಕೃತ ಭಾಷೆಯ ಸಂವರ್ಧನೆಗೆ ದೇಶ ಭಾಷೆಗಳಿಂದ ಅನುವಾದಿತವಾಗಿರುವ ಸಾಹಿತ್ಯ ಕೊಡುಗೆಯು ಸಮೃದ್ಧವಾಗುತ್ತ ನಡೆದಿರುವುದು ಒಂದು ವಿಶೇಷ ವಿದ್ಯಮಾನವಾಗಿದೆ.
ಅದು ಅಲ್ಲದೆ, ಈ ನನ್ನ ಕಾದಂಬರಿಗಳನ್ನೆ ತೆಗೆದುಕೊಂಡರೆ, ಪರ್ವವೂ ಸೇರಿದಂತೆ ಒಟ್ಟು ಏಳು ಕಾದಂಬರಿಗಳು ಸಂಸ್ಕøತಕ್ಕೆ ಅನುವಾದಗೊಂಡಿವೆ. ಭಾರತದ ಇತರ ಭಾಷೆಗಳ ವಿದ್ವಾಂಸರು ಸಂಸ್ಕೃತಕ್ಕೆ ಅನುವಾದಿತವಾಗಿರುವ ನನ್ನ ಈ ಕಾದಂಬರಿಗಳಿಂದ ನನ್ನ ಸಾಹಿತ್ಯದ ಅಂತೆಯೇ ಕನ್ನಡ ಸಾಹಿತ್ಯದ ಹಿರಿಮೆ, ಗರಿಮೆಗಳನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಒಂದು ಕಾಲದಲ್ಲಿ ಮಾತೃ ಸ್ವರೂಪಿಯಾಗಿದ್ದ ಸಂಸ್ಕೃತದಿಂದ ದೇಶದ ಭಾಷೆಗಳು ಸಮೃದ್ಧಗೊಂಡಿವೆ ಎಂದು ಭೈರಪ್ಪ ಹೇಳಿದರು.
ಇದೇ ವೇಳೆ ಹಿರಿಯ ಬರಹಗಾರ ಡಾ.ಪ್ರೇಮಶೇಖರ ಪ್ರಾಸ್ತವಿಕ ಮಾತುಗಳನ್ನಾಡಿದರು. ಡಾ.ಪ್ರಧಾನ ಗುರುದತ್ತ ಸೇರಿದಂತೆ ಪ್ರಮುಖರು ಉಪನ್ಯಾಸ ನೀಡಿದರು.
‘ಗುಜರಾತಿ ಅರ್ಥವಾಗಲು ಸಂಸ್ಕೃತ ಬೇಕಾಯಿತು’: ನಾನು ಉದ್ಯೋಗಾರ್ಥಿಯಾಗಿ ತತ್ತ್ವಶಾಸ್ತ್ರದ ಅಧ್ಯಾಪಕನಾಗಿ ವಲ್ಲಭ ವಿವಿಗೆ ಹೋದಾಗ ಗುಜರಾತಿ ಭಾಷೆ ಸ್ಥೂಲವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇದಕ್ಕೆ ಭಾರತೀಯ ಭಾಷೆಗಳ ಶಬ್ದ ಸಂಪತ್ತು ಸಂಸ್ಕೃತದಿಂದ ಪಡೆದಿರುವುದೇ ಕಾರಣ ಎಂದು ಭೈರಪ್ಪ ಹೇಳಿದ್ದಾರೆ.
ಭೈರಪ್ಪಗೆ ಅನಾರೋಗ್ಯ: ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಬೇಕಿದ್ದ ಡಾ. ಎಸ್.ಎಲ್.ಭೈರಪ್ಪ ಅವರು ಅನಾರೋಗ್ಯದಿಂದ ಗೈರು ಹಾಜರಾದ ಕಾರಣ, ಅವರ ಸಂದೇಶವನ್ನೂ ಡಾ.ಪ್ರಧಾನ ಗುರುದತ್ತ ವಾಚಿಸಿದರು.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕ ಮೃತ್ಯು







