ಉಡುಪಿ: ನಾಳೆ ಮಿಯಾರಿನಲ್ಲಿ ರಾಜ್ಯಮಟ್ಟದ ಗ್ರಾಮೀಣ ಕಂಬಳ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ, ಮಿಯ್ಯಾರು ಕಂಬಳ ಸಮಿತಿ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗ್ರಾಮೀಣ ಕಂಬಳ ಕ್ರೀಡಾಕೂಟ ಮತ್ತು ಲವಕುಶ ಜೋಡುಕೆರೆ ಬಯಲು ಕಂಬಳ ಜನವರಿ 8 ಮತ್ತು 9ರಂದು ಕಾರ್ಕಳ ತಾಲೂಕು ಮಿಯ್ಯಾರು ಲವಕುಶ ಜೋಡುಕೆರೆ ಬಯಲು ಕಂಬಳ ಗದ್ದೆಯಲ್ಲಿ ನಡೆಯಲಿದೆ.
ಜ.8ರಂದು ಸಭಾ ವೇದಿಕೆ ಕಾರ್ಯಕ್ರಮವನ್ನು ರಾಜ್ಯದ ಪ್ರವಾಸೋದ್ಯಮ ಮತ್ತು ಪರಿಸರ ಜೀವಶಾಸ್ತ್ರ ಇಲಾಖೆ ಸಚಿವ ಆನಂದ್ ಸಿಂಗ್, ಗ್ರಾಮೀಣ ಕಂಬಳವನ್ನು ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ, ಸಭಾ ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದು, ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅಧ್ಯಕ್ಷತೆ ಹಿಸಲಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಇತರ ಗಣ್ಯರೊಂದಿಗೆ ಮಿಯ್ಯಾರು ಗ್ರಾಪಂ ಅಧ್ಯಕ್ಷ ಗಿರೀಶ್ ಅಮೀನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.