ಪೂಂಜಾ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ವಸಂತ ಬಂಗೇರ ಆರೋಪ

ಉಪ್ಪಿನಂಗಡಿ: ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಪೂಂಜಾರ ಶಾಸಕತ್ವದ ಅವಧಿಯಲ್ಲಿ ವಿವಿಧ ಯೋಜನೆಯ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇನ್ನೊಂದೆಡೆ ಅಕ್ರಮ ಮರಳುಗಾರಿಕೆಯೂ ರಾಜಾರೋಷವಾಗಿ ನಡೆಯುತ್ತಿದೆ. ಸರಕಾರಿ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಎಚ್ಚರಿಕೆ ನೀಡಿದ್ದಾರೆ.
ಜ.7ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೇತ್ರಾವತಿ ಉಳಿಸಿ ಹೋರಾಟದ ಅಂಗವಾಗಿ ಬೆಳ್ತಂಗಡಿಯಿಂದ ವಾಹನ ಜಾಥಾ ಮೂಲಕ ಮುಗೇರಡ್ಕದಲ್ಲಿ ನಡೆಯುವ ಏತ ನೀರಾವರಿ ಯೋಜನೆ ಕಾಮಗಾರಿ ಘಟಕ ಮತ್ತು ಅಕ್ರಮ ಮರಳುಗಾರಿಕೆ ಅಡ್ಡೆ ಬಳಿಗೆ ಆಗಮಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಗೇರಡ್ಕದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಏತ ನೀರಾವರಿ ಕಾಮಗಾರಿ ನಡೆಯುತ್ತಿದೆ. ಆದರೆ ಈ ಯೋಜನೆಗೆ ಬೇಕಾಗಿರುವ ಮೊತ್ತ 150 ಕೋಟಿ ರೂಪಾಯಿ ಆಗಿದ್ದು, 100 ಕೋಟಿ ರೂಪಾಯಿ ಹೆಚ್ಚುವರಿ ತೋರಿಸುವ ಮೂಲಕ ರಾಜ್ಯ ಸರಕಾರವೇ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಭ್ರಷ್ಟರಿಗೆ ಹಣ ಮಾಡಲಷ್ಟೇ ಈ ಯೋಜನೆ. ಇದು ಫಲಪ್ರದವಾಗಿ ಜನರಿಗೆ ಇದರ ಉಪಯೋಗ ಸಿಗುವುದು ಅಸಾಧ್ಯದ ಮಾತು ಎಂದ ಅವರು, ಇಂತಹ ನೂರಾರು ಯೋಜನೆಗಳು ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿದ್ದು, ಶಾಸಕ ಹರೀಶ್ ಪೂಂಜ ಬೆಳ್ತಂಗಡಿಯನ್ನು ಭ್ರಷ್ಟ ತಾಲೂಕನ್ನಾಗಿ ಮಾಡಿದ್ದಾರೆ ಎಂದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಬೆಳ್ತಂಗಡಿ ತಾಲೂಕಿನ 25 ಗ್ರಾಮಗಳಿಗೆ ನೀರು ಕೊಡುವ ಉದ್ದೇಶವನ್ನಿಟ್ಟುಕೊಂಡು ಏತ ನೀರಾವರಿ ಯೋಜನೆಯನ್ನು ಸರಕಾರ ಅನುಷ್ಠಾನಿಸಿದೆ. ಆದರೆ ಈ ಯೋಜನೆಯ ಕಾಮಗಾರಿ ನಡೆಸಲಾಗುತ್ತಿರುವ ಮುಗೇರಡ್ಕದ ನೇತ್ರಾವತಿ ನದಿಯಲ್ಲೇ ಈಗಲೇ ನೀರಿಲ್ಲ. ಇಂತಹ ಪರಿಸ್ಥಿತಿಯಿರುವಾಗ ಈ ಕಾಮಗಾರಿಯಿಂದ ತಾಲೂಕಿನ 25 ಗ್ರಾಮಗಳಿಗೆ ನೀರು ಹರಿಸಲು ಹೇಗೆ ಸಾಧ್ಯ. 40 ಶೇಕಡಾ ಕಮಿಷನ್ ಪಡೆಯುವ ಸರಕಾರ ಇಲ್ಲೊಂದು ವ್ಯರ್ಥಾ ಯೋಜನೆಯನ್ನು ಅನುಷ್ಠಾನಿಸಿ ಜನರ ಹಣವನ್ನು ಗುಳುಂ ಮಾಡಲು ಹೊರಟಿದೆ ಎಂದು ಆರೋಪಿಸಿದರಲ್ಲದೆ, ಕೋಮುವಾದವೊಂದಿದ್ರೆ ಏನು ಮಾಡಲು ಸಾಧ್ಯ ಎಂಬ ಭಾವನೆ ಇಲ್ಲಿನ ಶಾಸಕರಲ್ಲಿದೆ. ಹಾಗಾಗಿ ಬೆಳ್ತಂಗಡಿ ಭಾಗದಲ್ಲಿ ಪರವಾನಿಗೆಯಿಲ್ಲದೆ ಬೇಕಾದಷ್ಟು ಮರಳಿನ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬೆಳ್ತಂಗಡಿ ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ರಂಜನ್ ಗೌಡ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಕೆಪಿಸಿಸಿ. ಕಾರ್ಯದರ್ಶಿಗಳಾದ ಎ.ಸಿ. ಮ್ಯಾಥ್ಯು, ಅಬ್ದುಲ್ ರಹಿಮಾನ್ ಪಡ್ಪು, ಕೇಶವ ಬೆಳಾಲು, ಪಕ್ಷದ ಪದಾಧಿಕಾರಿಗಳಾದ ಅಶ್ರಫ್ ನೆರಿಯ, ಸಲೀಂ ಕೆ., ಸಮದ್ ಕುಂಡಡ್ಕ, ವಸಂತ ವಿಕೆ., ರವಿ, ಓಬಯ್ಯ, ಮಹಿಳಾ ಘಟಕದ ವಂದನಾ ಕೆ., ನಮಿತಾ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಕಲ್ಲೇರಿಯಲ್ಲಿಯೂ ಪ್ರತಿಭಟನೆ ನಡೆಯಿತು.
ಎಸ್‍ಐಗೆ ತರಾಟೆ
ಪ್ರತಿಭಟನಾಕಾರರು ಮರಳು ರಾಶಿಯ ಬಳಿ ತೆರಳಿ ನೋಡುತ್ತಿದ್ದಾಗ ಸ್ಥಳಕ್ಕೆ ಉಪ್ಪಿನಂಗಡಿ ಎಸ್.ಐ. ರಾಜೇಶ್ ಬಂದಿದ್ದು, ಇವರೊಂದಿಗೆ ಮಾತನಾಡಿದ ಬಂಗೇರ "ಯಾಕೆ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ"? ಎಂದರು. ಆಗ ಎಸ್‍ಐ ಅವರು ಬಂಗೇರ ಅವರನ್ನು ಉದ್ದೇಶಿಸಿ "ಮನವಿ ಕೊಡಿ" ಎಂದರು. ಇದರಿಂದ ಕುಪಿತರಾದ ಬಂಗೇರರವರು ನಿಮ್ಮ ಕಣ್ಣ ಮುಂದೆ ಇಷ್ಟೊಂದು ಅಕ್ರಮ ನಡೆಯುತ್ತಿದೆ. ಲಾರಿಯಲ್ಲಿ ಮರಳು ಹೋಗುತ್ತಿದ್ದರೂ, ಮನವಿ ಕೊಡಿ ಎನ್ನುತ್ತೀರಲ್ಲ," ಸರಕಾರದಿಂದ ಸಂಬಳ ಪಡೆದುಕೊಂಡು ದ್ರೋಹ ಬಗೆಯುತ್ತಿದ್ದೀರಿ, ಇದು ಸರಿ ಅಲ್ಲ ಎಸ್‍ಐ ಅವರನ್ನು ತರಾಟೆಗೆ ಎತ್ತಿಕೊಂಡರು.