ಜನತೆಯ ರಕ್ಷಣೆ ಅರಿಯದವರ ಆಡಳಿತ ವ್ಯವಸ್ಥೆಯೇ ದೇಶದಲ್ಲಿ ಅರಾಜಕತೆಗೆ ಕಾರಣ: ಬಿ.ಎಂ.ಭಟ್

ಪುತ್ತೂರು: ರಾಷ್ಟ್ರ ಎಂದರೆ ನೆಲ ಮತ್ತು ಮಣ್ಣು ಅಲ್ಲ. ರಾಷ್ಟ್ರ ಎಂದರೆ ಜನ. ರಾಷ್ಟ್ರ ಪ್ರೇಮ ಎಂದರೆ ಬರೇ ನೆಲದ ರಕ್ಷಣೆ ಮಾತ್ರವಲ್ಲ, ಬದಲಿಗೆ ದೇಶದ ಜನರ ಬದುಕಿನ ರಕ್ಷಣೆ ಎಂಬ ವಿಚಾರ ಅರಿಯದವರು ಇಂದು ನಮ್ಮನ್ನಾಳುತ್ತಿರುವುದೇ ದೇಶದಲ್ಲಿ ಅರಾಜಕತೆ ಬೆಳೆಯಲು ಕಾರಣ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಹೇಳಿದ್ದಾರೆ.
ಅವರು ಶನಿವಾರ ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಇದರ ಸಹಕಾರದೊಂದಿಗೆ ಮತ್ತು ಶೋಷಿತರ ಅರಿವಿನ ಗುರು ಕುದ್ಮಾಲ್ ರಂಗರಾವ್ ಸ್ಮರಣೆಯಲ್ಲಿ ನಡೆಯುತ್ತಿರುವ ಮಂಗಳೂರು-ಬೆಂಗಳೂರು ಭಾವೈಕ್ಯತಾ ಜಾಥಾದ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಬದುಕಿನ ವಿರುದ್ದ ಇರುವುದೇ ದೇಶದ್ರೋಹದ ಕೆಲಸ. ಚಾ ಮಾರಿ ಪ್ರದಾನಿ ಆದವರಿಗೆ ಚಾ ಮಾರುವವರ ಕಷ್ಟ ಯಾಕೆ ಗೊತ್ತಿಲ್ಲ?. ಓರ್ವ ತಾಯಿಯ ಮಗನಾಗಿ ತಾಯಂದಿರ ಕಷ್ಟ ಯಾಕೆ ಗೊತ್ತಿಲ್ಲ?. ಬೀಡಿ ಕಟ್ಟುವ ಕುಟುಂಬದಿಂದ ಬಂದ ಜನಪ್ರತಿನಿಧಿಗಳಿಗೆ ಬೀಡಿ ಕಾರ್ಮಿಕರ ಸಂಕಷ್ಟ ಅರ್ಥ ಆಗುತ್ತಿಲ್ಲ, ರೈತ ಕುಟುಂಬದಿಂದ ಬಂದ ಮುಖಂಡರುಗಳಿಗೆ ಕೃಷಿಕರ ಕಷ್ಟ ಅರ್ಥ ಆಗುತ್ತಿಲ್ಲ ಎಂದರೆ ಇವರಿಗೆ ಜನರ ಬದುಕು ಬೇಡ ಬದಲಿಗೆ ದೇಶದ ಲೂಟಿಗಾಗಿಯೇ ಇವರ ಆಡಳಿತವಾಗಿದೆ ಎಂದವರು ಹೇಳಿದರು.
ಬೆಲೆ ಏರಿಕೆ, ನಿರುದ್ಯೋಗ, ರೈತರ ಪ್ರಶ್ನೆ, ಅಕ್ರಮ ಸಕ್ರಮ ಆಗದಿರುವುದರ ಬಗ್ಗೆ, ಜನವಿರೋಧಿ ಆಡಳಿತದ ಬಗ್ಗೆ ಪ್ರಶ್ನೆ ಎತ್ತಬಾದೆಂದು ಸಂಘಪರಿವಾರ ಹಿಂದುತ್ವ ಹೆಸರಲ್ಲಿ ಹಿಂದು ಧರ್ಮದ ಮೇಲೆ ದಾಳಿ ನಡೆಸುತ್ತಾ ಬ್ರಿಟೀಶರಂತೆ ಒಡೆದು ಆಳುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಸಂಘಪರಿವಾರದ ಹಿಂದುತ್ವವಾದಿಗಳ ದಾಳಿಯಿಂದ ಹಿಂದು ಧರ್ಮದ ರಕ್ಷಣೆ ಮಾಡುವುದರ ಜತೆಗೆ ಭಾರತೀಯರ ರಕ್ಷಣೆಯೇ ನಿಜವಾದ ದೇಶ ಭಕ್ತಿ. ನಾವು ಭಾರತೀಯರು ನಿಮ್ಮ ಬೆಂಕಿ ಹಾಕುವ ಸಂಸ್ಕೃತಿಯನ್ನು ತಡೆದು ಅದನ್ನು ನೀರು ಹಾಕಿ ತಣಿಸಿಯೇ ಸಿದ್ದ. ಜನರಲ್ಲಿ ಭಾವೈಕ್ಯತೆ ಮೂಡಿಸಿ ಸಂವಿದಾನ ರಕ್ಷಿಸುತ್ತಾ ಭಾರತವನ್ನು ರಕ್ಷಣೆಗೆ ಸಿದ್ದರಾಗಿ ಈ ಜಾಥಾದ ಮೂಲಕ ಜನ ಜಾಗೃತಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಜೆಸಿಟಿಯು ರಾಜ್ಯ ನಾಯಕರಾದ ಕೆ.ವಿ.ಭಟ್, ಪ್ರೇಮ ನಾಥ ಶೆಟ್ಟಿ ಬಾಳ್ತಿಲ ಮಾತಾಡಿದರು. ಸಭೆಯ ಅದ್ಯಕ್ಷತೆಯನ್ನು ರೂಪೇಶ್ ರೈ ವಹಿಸಿದ್ದರು.
ರಾಜ್ಯದ ವಿವಿಧ ಕಡೆಗಳಿಂದ ಹೊರಟ ಒಟ್ಟು 4 ಜಾಥಾಗಳು ಜನವರಿ 11 ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಲಿದೆ.
ಜಾತಾದ ಉದ್ದೇಶ ಹಾಗೂ ಹಕ್ಕೊತ್ತಾಯಗಳು: ರಾಜ್ಯ ಸರ್ಕಾರವು ತಂದ ಮೂರು ಕರಾಳ ಕಾಯ್ದೆಗಳಾದ ಭೂಸುಧಾರಣಾ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಗೋಹತ್ಯೆ ನಿಷೇದ ಮತ್ತು ಸಂರಕ್ಷಣಾ ಕಾಯ್ದೆ ಹಿಂಪಡೆಯಬೇಕು. ಎಂ.ಆರ್,ಪಿ.ಎಲ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಆದ್ಯತೆ ಮೇರೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕಾದಿರಿಸಿದ ಜಮೀನುಗಳನ್ನು ಅವರಿಗೆ ತಕ್ಷಣ ಹಂಚಿಕೆ ಮಾಡಬೇಕು. ಸಂವಿಧಾನವನ್ನು ಕಡ್ಡಾಯ ಶಾಲಾ ಕಾಲೇಜುಗಳಲ್ಲಿ ಪಠ್ಯವನ್ನಾಗಿ ಬೋಧಿಸಬೇಕು, ಭಾರತದ ಸಂವಿಧಾನವನ್ನು ರಕ್ಷಿಸಬೇಕು ಮತ್ತಿತರ ಉದ್ದೇಶ ಮತ್ತು ಹಕ್ಕೊತ್ತಾಯಗಳನ್ನು ಜಾಥಾ ಹೊಂದಿದೆ.
ಜಾಥಾವನ್ನು ನಾಯಕ ರವಿಕಿರಣ ಪುಣಚ ಸ್ವಾಗತಿಸಿದರು.
ಸಭೆಯಲ್ಲಿ ಪುತ್ತೂರು ಕಾರ್ಮಿಕ ನಾಯಕ ಪಿಕೆ ಸತೀಶನ್, ಕರ್ನಾಟಕ ರಾಜ್ಯ ಕೃಷಿಕೂಲಿಕಾರ ಸಂಘಟನೆಯ ರಾಜ್ಯ ಉಪಾದ್ಯಕ್ಷ ಶಿವಪ್ರಕಾಶ್, ಜಮಾತೆ ಇಸ್ಲಾಮಿ ಹಿಂದು ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಸುರೇಂದ್ರ ಕೇರ್ಯ, ಗಣೇಶ ಪ್ರಸಾದ್, ರಾಮಚಂದ್ರ ಮತ್ತಿತರರಿದ್ದರು.







