ಪುತ್ತೂರಿನಲ್ಲಿ ಕಿಲ್ಲೆ ಮೈದಾನದಲ್ಲಿ ಸಸ್ಯ ಜಾತ್ರೆ: ಜೀವಕ್ಷೇತ್ರಕ್ಕಿಂತಲೂ ಮೊದಲು ಸಸ್ಯಕ್ಷೇತ್ರದ ಆರಂಭ: ಮಠಂದೂರು

ಪುತ್ತೂರು: ಸಸ್ಯಕ್ಷೇತ್ರವು ಮೊದಲು ಆರಂಭಗೊಂಡಿದ್ದು, ಬಳಿಕ ಜೀವಕ್ಷೇತ್ರವು ಉಂಟಾಗಿದೆ. ಎಲ್ಲರ ಬದುಕೂ ಕೃಷಿಕರ ಮನೆಯಿಂದ ಆರಂಭವಾಗುತ್ತದೆ. ಅಹಾರ ಉತ್ಪಾಧನೆಯಲ್ಲಿ ಭಾರತವು ಸ್ವಾವಲಂಬಿಯಾಗಿದೆ. ಪಾರಂಪರಿಕ ಕೃಷಿಯತ್ತ ಎಲ್ಲರ ಒಲವು ಬೆಳೆಯಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಸುದ್ದಿ ಮಾಹಿತಿ ಟ್ರಸ್ಟ್‍ನ ಪ್ರಾಯೋಜಕತ್ವದಲ್ಲಿ ದ.ಕ.ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ, ವಿವಿಧ ಒಕ್ಕೂಟಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜ.7 ಮತ್ತು 8ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಸಸ್ಯ ಜಾತ್ರೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳು ಇಂದಿಗೂ ಕೃಷಿ ಪ್ರದಾನವಾಗಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಶೇ. 85 ಗ್ರಾಮೀಣ ಮತ್ತು ಶೇ. 15 ನಗರ ಪ್ರದೇಶಗಳಿದ್ದವು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದಭದಲ್ಲಿ ಇದು ಶೇ. 60 ಮತ್ತು ಶೇ. 40ಕ್ಕೆ ಬದಲಾಯಿತು. ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುವಾಗ ಅದು ಶೇ. 50 ಮತ್ತು ಶೇ. 50 ಆಗುವ ಸಂಭವವಿದೆ. ಈ ನಡುವೆ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀರು ಕ್ರಾಂತಿಗಳ ಮೂಲಕ ಕೃಷಿ ಮತ್ತು ಪರಿಸರವನ್ನು ಉಳಿಸುವ ಕೆಲಸ ಕಾರ್ಯಗಳು ನಿರಂತರವಾಗಿ ನಡೆದಿದೆ. ಕೃಷಿಕರು ಯಾಂತ್ರಿಕೃತ ಪದ್ದತಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಇದರೊಂದಿಗೆ ವಿಷಪೂರಿತ ಆಹಾರ, ಗಾಳಿ, ನೀರು ನಿರ್ಮಾಣವಾಗುತ್ತಿದೆ. ಇದೆಲ್ಲವನ್ನು ತಡೆಯಲು ಮತ್ತೊಮ್ಮೆ ನಾವು ಹಿರಿಯರು ಮಾಡುತ್ತಿದ್ದ ಪಾರಂಪರಿಕ ಕೃಷಿ ಪದ್ದತಿಯತ್ತ ಸಾಗಬೇಕಾಗಿದೆ ಎಂದರು.
ಪುತ್ತೂರು ನಗರಸಭಾ ಸದಸ್ಯ ಕೆ. ಜೀವಂಧರ್ ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಮಂಗಳೂರು ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಮಾತನಾಡಿದರು.
ಸಸ್ಯಮೇಳದ ಸ್ಟಾಲ್‍ಗಳನ್ನು ಡಿಸಿಸಿ ಬ್ಯಾಂಕ್ ನಿದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಿದರು. ವೇದಿಕೆಯಲ್ಲಿ ಪುತ್ತೂರು ತಹಸೀಲ್ದಾರ್ ನಿಸರ್ಗಪ್ರಿಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಗಿರಿಜಾ ಎಸ್ ರೈ, ಕಸ್ತೂರಿ ಕಲಾ ರೈ, ಡಾ. ಎನ್. ಯದುಕುಮಾರ್, ಜಯಂತ ನಡುಬೈಲು ಮತ್ತು ಪೂರ್ಣಿಮಾ ಜಗದೀಶ್ ಹಾಗೂ ಸಂಜೀವಿನಿ ಒಕ್ಕೂಟದ ಸಾಧಕ ಸದಸ್ಯರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ನೆಲ್ಲಿಕಟ್ಟೆಯಿಂದ ಕಿಲ್ಲೆ ಮೈದಾನದ ತನಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ ತೆಂಗಿನ ಕಾಯಿ ಒಡೆದು ಮೆರವಣಿಗೆ ಚಾಲನೆ ನೀಡಿದರು.
ತಾಲೂಕು ಪಂಚಾಯುತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಪೌರಾಯುಕ್ತ ಮಧು ಎಸ್ ಮನೋಹರ್ ವಂದಿಸಿದರು. ಸುದ್ದಿ ಮಾಹಿತಿ ಟ್ರಸ್ಟ್ ನ ಅಧ್ಯಕ್ಷ ಡಾ.ಯು.ಪಿ.ಶಿವಾನಂದ ಪ್ರಾಸ್ತಾವಿಕ ಮಾತುಗಳನ್ಮಾಡಿದರು ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ಉಮೇಶ್ ಮಿತ್ತಡ್ಕ ಮತ್ತು ದಾಮೋದರ ಮುಂಡೋಳೆ ವಿವಿದ ಕಾರ್ಯಕ್ರಮ ನಿರೂಪಿಸಿದರು.