3ನೇ ಟ್ವೆಂಟಿ-20: ಸೂರ್ಯಕುಮಾರ್ ಶತಕ, ಶ್ರೀಲಂಕಾ ಗೆಲುವಿಗೆ 229 ರನ್ ಸವಾಲು

ರಾಜ್‌ಕೋಟ್, ಜ.7: ಸೂರ್ಯ ಕುಮಾರ್ ಯಾದವ್ (ಔಟಾಗದೆ 112 ರನ್, 51 ಎಸೆತ, 7 ಬೌಂಡರಿ, 9 ಸಿಕ್ಸರ್)ಸಿಡಿಸಿದ ಸೊಗಸಾದ ಶತಕದ ಸಹಾಯದಿಂದ ಭಾರತ ಕ್ರಿಕೆಟ್ ತಂಡ ಸರಣಿ ನಿರ್ಣಾಯಕ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ 229 ರನ್ ಗುರಿ ನೀಡಿದೆ.
ಶನಿವಾರ ಟಾಸ್ ಜಯಿಸಿದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು.
ಭಾರತದ ಪರ ಆರಂಭಿಕ ಬ್ಯಾಟರ್ ಶುಭಮನ್ ಗಿಲ್(46 ರನ್, 36 ಎಸೆತ),ರಾಹುಲ್ ತ್ರಿಪಾಠಿ(35 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತ ಇನಿಂಗ್ಸ್‌ನ ಮೊದಲ ಓವರ್‌ನ 4ನೇ ಎಸೆತದಲ್ಲಿ ಇಶಾನ್ ಕಿಶನ್ ವಿಕೆಟನ್ನು ಕಳೆದುಕೊಂಡಿತು. ಆಗ 2ನೇ ವಿಕೆಟಿಗೆ 49 ರನ್ ಜೊತೆಯಾಟ ನಡೆಸಿದ ಗಿಲ್ ಹಾಗೂ ತ್ರಿಪಾಠಿ ತಂಡವನ್ನು ಆಧರಿಸಿದರು. ತ್ರಿಪಾಠಿ ಔಟಾದ ನಂತರ ಗಿಲ್ ಜೊತೆ 3ನೇ ವಿಕೆಟಿಗೆ 111 ರನ್ ಸೇರಿಸಿದ ಯಾದವ್ ತಂಡದ ಮೊತ್ತವನ್ನು ಹಿಗ್ಗಿಸಿದರು. ನಾಯಕ ಹಾರ್ದಿಕ್ ಪಾಂಡ್ಯ(4 ರನ್) ಹಾಗೂ ದೀಪಕ್ ಹೂಡಾ(4)ಬೇಗನೆ ವಿಕೆಟ್ ಕೈಚೆಲ್ಲಿದರು.
ಯಾದವ್ ಹಾಗೂ ಅಕ್ಷರ್ ಪಟೇಲ್(ಔಟಾಗದೆ 21 ರನ್, 9 ಎಸೆತ) 6ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 39 ರನ್ ಸೇರಿಸಿ ತಂಡದ ಮೊತ್ತವನ್ನು 228ಕ್ಕೆ ತಲುಪಿಸಿದರು.
ಶ್ರೀಲಂಕಾದ ಪರ ದಿಲ್ಶನ್ ಮದುಶಂಕ 55 ರನ್‌ಗೆ 2 ವಿಕೆಟ್ ಪಡೆದರು.