ಕುಂದಾಪುರ: ಸೀಮೆಎಣ್ಣೆ ಪೂರೈಕೆಗೆ 20 ದಿನಗಳ ಗಡುವು; ನೋಟಾ ಅಭಿಯಾನಕ್ಕೆ ಮೀನುಗಾರರ ಚಿಂತನೆ
ಕುಂದಾಪುರ: ಕಳೆದ 3-4 ತಿಂಗಳಿನಿಂದ ಹೋರಾಟ ಮಾಡುತ್ತಿದ್ದರೂ, ಆಡಳಿತ ಪಕ್ಷ, ವಿಪಕ್ಷ ನಾಯಕರಿಗೆಲ್ಲ ಮನವಿ ಮಾಡಿದರೂ ಇನ್ನೂ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಮಾತ್ರ ಸಿಗದ ಕಾರಣ ಆಕ್ರೋಶ ವ್ಯಕ್ತವಾಗಿದ್ದು, ಮುಂದಿನ 20 ದಿನದೊಳಗೆ 7 ಸಾವಿರ ಕಿ.ಲೀ. ಸೀಮೆಎಣ್ಣೆ ಪೂರೈಸದಿದ್ದರೆ, ನೋಟಾ ಅಭಿಯಾನ ಕೈಗೊಳ್ಳುವುದಾಗಿ ಗಂಗೊಳ್ಳಿ ವಲಯದ ನಾಡದೋಣಿ ಮೀನುಗಾರ ಸಂಘ ಎಚ್ಚರಿಸಿದೆ.
ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ 8,030 ನಾಡದೋಣಿಗಳಿಗೆ ಪರವಾನಿಗೆಯಿದೆ. ಪ್ರತಿ ಪರವಾನಿಗೆಗೆ 300 ಲೀ.ನಂತೆ ಆಗಸ್ಟ್‌ನಿಂದ ಮೇ ತಿಂಗಳವರೆಗೆ ಒಟ್ಟು 10 ತಿಂಗಳಿಗೆ 24 ಸಾವಿರ ಕಿಲೋ ಲೀ. ಸೀಮೆಎಣ್ಣೆ ನೀಡಬೇಕು. ಆದರೆ ಈವರೆಗೆ 5 ಸಾವಿರ ಕಿಲೋ ಲೀ. ಮಾತ್ರ ಪೂರೈಸಿದ್ದು, ಡಿಸೆಂಬರ್‌ವರೆಗೆ ಇನ್ನು 7 ಸಾವಿರ ಕಿ.ಲೀ. ಸೀಮೆಎಣ್ಣೆ ಪೂರೈಸಬೇಕಿತ್ತು ಎಂದು ಮೀನುಗಾರರು ದೂರಿದ್ದಾರೆ.
ಕಳೆದ ತಿಂಗಳು ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಎಲ್ಲ ಸಚಿವರು, ಸಂಸದರು, ಶಾಸಕರಿಗೂ ನಮ್ಮ ಅಹವಾಲು ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾರಿಂದಲೂ ಕೇಂದ್ರಕ್ಕೆ ಒತ್ತಡ ಹೇರಿ ಅಗತ್ಯ ಸೀಮೆಎಣ್ಣೆ ಬಿಡುಗೊಳಿಸಲು ಸಾಧ್ಯವಾಗಿಲ್ಲ. ಮುಂದಿನ 20 ದಿನದೊಳಗೆ ಕನಿಷ್ಠ 7 ಸಾವಿರ ಕಿಲೋ ಲೀ. ಸೀಮೆಎಣ್ಣೆಯನ್ನು ಪೂರೈಸದಿದ್ದರೆ, ಗಂಗೊಳ್ಳಿಯ ನಾಡದೋಣಿ ಮೀನುಗಾರರು ಈಗಾಗಲೇ ಸಂಕಲ್ಪ ಸಾಧನಾ ಸಭೆಯ ತೀರ್ಮಾನದಂತೆ ನೋಟಾ ಅಭಿಯಾನವನ್ನು ಆರಂಭಿಸಲಿದ್ದಾರೆ ಎಂದು ಮೀನುಗಾರರು ವಿವರಿಸಿದ್ದಾರೆ.
ಅದಕ್ಕೂ ಮೊದಲು ಕರಾವಳಿ ಜಿಲ್ಲೆಗಳ ಎಲ್ಲ ಶಾಸಕರಿಗೂ ನೋಟಾ ಅಭಿಯಾನ ಕೈಗೊಳ್ಳುವ ಬಗ್ಗೆ ಪತ್ರ ಬರೆಯಲಾಗುವುದು. ಈ ನೋಟಾ ಅಭಿಯಾನವನ್ನು ಕರಾವಳಿಯ 3 ಜಿಲ್ಲೆಗಳಿಗೂ ವಿಸ್ತರಿಸಿ, ಮೀನುಗಾರರನ್ನು ಒಗ್ಗೂಡಿಸಿ, ಹೋರಾಟ ನಡೆಸಲಾಗುವುದು ಎಂದು ಗಂಗೊಳ್ಳಿ ವಲಯದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ್ ಖಾರ್ವಿ ತಿಳಿಸಿದ್ದಾರೆ.