ಕುಸಿಯುತ್ತಿರುವ ಜೋಷಿ ಮಠಕ್ಕೆ ಭೇಟಿ ನೀಡಿದ ಉತ್ತರಾಖಂಡ ಸಿಎಂ: 600 ಕುಟುಂಬಗಳನ್ನು ಸ್ಥಳಾಂತರಿಸಲು ಆದೇಶ

ಹೊಸದಿಲ್ಲಿ: ಕುಸಿಯುವ ಅಪಾಯದಲ್ಲಿರುವ ಜೋಷಿಮಠ ಪಟ್ಟಣದಲ್ಲಿರುವ ಹಾಗೂ ಬಿರುಕು ಉಂಟಾಗಿರುವ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 600 ಕುಟುಂಬಗಳನ್ನು ಕೂಡಲೇ ಸ್ಥಳಾಂತರಿಸುವಂತೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆದೇಶ ನೀಡಿದ್ದಾರೆ. ಕುಸಿಯುತ್ತಿರುವ ಪಟ್ಟಣದ ಪರಿಸ್ಥಿತಿಯನ್ನು ಶುಕ್ರವಾರ ವೀಡಿಯೊ ಕಾನ್ಫೆರನ್ಸ್ ಮೂಲಕ ಅವಲೋಕಿಸಿದ ಬಳಿಕ ಧಾಮಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘‘ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಜೋಷಿಮಠದಲ್ಲಿ ಅಪಾಯದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 600 ಕುಟುಂಬಗಳನ್ನು ಸುರಕಿತವಾಗಿ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಜೋಷಿಮಠದ ಪರಿಸ್ಥಿತಿ ನಿಭಾಯಿಸಲು ನಾವು ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸಲು ಗರ್ಹವಾಲ್ ಆಯುಕ್ತ ಸುಶೀಲ್ ಕುಮಾರ್ ಹಾಗೂ ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಅವರೊಂದಿಗೆ ತಜ್ಞರ ತಂಡ ಮೈದಾನದಲ್ಲೇ ಮೊಕ್ಕಾಂ ಹೂಡಿದೆ ಎಂದು ಅವರು ಹೇಳಿದರು.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಪರಿಸ್ಥಿತಿ ಅವಲೋಕಿಸಲು ಕುಸಿಯುತ್ತಿರುವ ಜೋಷಿಮಠಕ್ಕೆ ಶನಿವಾರ ಭೇಟಿ ನೀಡಿದ್ದಾರೆ. ಈ ಸಂದರ್ಭ ಅವರು ಸ್ಥಳೀಯರು ಹಾಗೂ ಕುಟುಂಬಗಳನ್ನು ಭೇಟಿಯಾದರು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದು ನಮ್ಮ ಮೊದಲ ಕೆಲಸ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಶ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಪೂರ್ವ ಸಿದ್ಧತೆ ಮಾಡಲಾಗುತ್ತಿದೆ.
ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುವುದು ನಮ್ಮ ಮೊದಲ ಗುರಿ. ಭೂವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಗುವಾಹತಿ ಇನ್ಸ್ಟಿಟ್ಯೂಟ್ ಹಾಗೂ ಐಐಟಿ ರೂರ್ಕಿ ಕೂಡ ಇಸ್ರೊದಿಂದ ಮಾತುಕತೆ ನಡೆಸುತ್ತಿದೆ. ಎಲ್ಲರೂ ಪರಿಹಾರ ಹುಡುಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘ಇಲ್ಲಿಂದ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ನಾವು ಅದಕ್ಕಾಗಿ ಸ್ಥಳ ಹುಡುಕುತ್ತಿದ್ದೇವೆ. ಇದು ಚಳಿಗಾಲವಾಗಿರುವುದರಿಂದ ನಾವು ತತ್‍ಕ್ಷಣ ಗಮನ ಹರಿಸಬೇಕಾದ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ’’ ಎಂದು ಧಾಮಿ ಹೇಳಿದರು.







