ಪ್ರಚೋದನಾತ್ಮಕ ಹೇಳಿಕೆ: ಪ್ರಜ್ಞಾ ಠಾಕೂರ್ ವಿರುದ್ಧ ಕ್ರಮಕ್ಕೆ ಲೋಕಸಭಾ ಸ್ಪೀಕರ್ ಗೆ ಮಾಜಿ ಅಧಿಕಾರಿಗಳ ಆಗ್ರಹ

ಹೊಸದಿಲ್ಲಿ,ಜ.7: ಇತ್ತೀಚಿಗೆ ಕರ್ನಾಟಕದ ಶಿವಮೊಗ್ಗದಲ್ಲಿ ಮಾಡಿದ್ದ ದ್ವೇಷಭಾಷಣಕ್ಕಾಗಿ ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ 103 ಮಾಜಿ ಅಧಿಕಾರಿಗಳ ಗುಂಪು ಲೋಕಸಭಾ ಸ್ಪೀಕರ್ ಮತ್ತು ನೈತಿಕತೆ ಸಮಿತಿಯನ್ನು ಆಗ್ರಹಿಸಿದೆ. ಠಾಕೂರ್ ತನ್ನ ಭಾಷಣದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಹಿಂದುಗಳನ್ನು ಆಗ್ರಹಿಸಿದ್ದರು.
ಶಿವಮೊಗ್ಗದಲ್ಲಿ ಹಿಂದು ಸಂಘಟನೆಯೊಂದು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡುವಾಗ ಮುಸ್ಲಿಮರ ವಿರುದ್ಧ ಪ್ರಚೋದಕ ಹೇಳಿಕೆಗಳನ್ನು ನೀಡಿದ ಬಳಿಕ ಅಲ್ಲಿಯ ಪೊಲೀಸರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
‘ಲವ್ ಜಿಹಾದ್’ ಕುರಿತು ಮುಸ್ಲಿಮರ ವಿರುದ್ಧ ತೀವ್ರ ದಾಳಿ ನಡೆಸಿದ್ದ ಠಾಕೂರ್,‘ನಿಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು,ಏನೂ ಇಲ್ಲದಿದ್ದರೆ ತರಕಾರಿಗಳನ್ನು ಕತ್ತರಿಸುವ ಹರಿತವಾದ ಚೂರಿಗಳನ್ನು ಇಟ್ಟುಕೊಳ್ಳಿ. ಯಾವಾಗ ಯಾವ ಸ್ಥಿತಿ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಆತ್ಮರಕ್ಷಣೆಯ ಹಕ್ಕು ಹೊಂದಿದ್ದಾರೆ ’ ಎಂದು ಕರೆ ನೀಡಿದ್ದರು.
ಠಾಕೂರ್ ತನ್ನ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸುವುದನ್ನು ತಪ್ಪಿಸಲು ತನ್ನ ದ್ವೇಷ ಭಾಷಣದಲ್ಲಿ ಬುದ್ಧಿವಂತಿಕೆಯಿಂದ ಪದಗಳನ್ನು ಪೋಣಿಸಿರುವಂತೆ ಕಾಣುತ್ತಿದೆ. ಅವರ ಭಾಷಣವು ಆತ್ಮರಕ್ಷಣೆಗೆ ಕರೆಯಾಗಿರುವಂತೆ ಕಾಣಬಹುದು ಎಂದು ತನ್ನ ಪತ್ರದಲ್ಲಿ ಹೇಳಿರುವ ಮಾಜಿ ಅಧಿಕಾರಿಗಳು,ಠಾಕೂರ್ ಮುಸ್ಲಿಮ್ ಪದವನ್ನು ಬಳಸಿರಲಿಲ್ಲವಾದರೂ ಹಿಂದುಯೇತರರಿಂದ ದಾಳಿಗಳ ಬಗ್ಗೆ ಭಯವನ್ನು ಹೊಂದಿರುವಂತೆ ಅವರು ಸ್ಪಷ್ಟವಾಗಿ ತನ್ನ ಹಿಂದು ಸಭಿಕರಿಗೆ ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಇಲಾಖೆಯ ಮಾಜಿ ಕಾರ್ಯದರ್ಶಿ ಅನಿತಾ ಅಗ್ನಿಹೋತ್ರಿ,ರಾಜಸ್ಥಾನದ ಮಾಜಿ ಮುಖ್ಯ ಕಾರ್ಯದರ್ಶಿ ಸಲಾಹುದ್ದೀನ್ ಅಹ್ಮದ್,ಕೇಂದ್ರ ಸಾರಿಗೆ ಸಚಿವಾಲಯದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಎಸ್.ಪಿ.ಆಂಬ್ರೋಸ್ ಮತ್ತಿತರರು ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.
ತನ್ನ ದ್ವೇಷದ ಮಾತುಗಳಿಂದ ಠಾಕೂರ್ ಐಪಿಸಿಯಡಿ ವಿವಿಧ ಅಪರಾಧಗಳನ್ನು ಎಸಗಿರುವುದು ಮಾತ್ರವಲ್ಲ,ಸಂಸದೆಯಾಗಿ ಸ್ವೀಕರಿಸಿದ್ದ ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರಮಾಣ ವಚನವನ್ನೂ ಉಲ್ಲಂಘಿಸಿದ್ದಾರೆ ಎಂದು ಈ ಅಧಿಕಾರಿಗಳು ಪತ್ರದಲ್ಲಿ ಆರೋಪಿಸಿದ್ದಾರೆ.
ವಿವಿಧ ಹಿಂದುಯೇತರ ಸಮುದಾಯಗಳ,ಪ್ರಮುಖವಾಗಿ ಮುಸ್ಲಿಮರ ವಿರುದ್ಧ ಮುದ್ರಣ,ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನವೂ ವಿಷವನ್ನು ಕಾರಲಾಗುತ್ತಿದೆ. ಇತ್ತೀಚಿಗೆ ಕ್ರೈಸ್ತರ ವಿರುದ್ಧವೂ ಈ ದಾಳಿ ಆರಂಭಗೊಂಡಿದೆ. ಹಿಂದುಗಳೇತರರ ವಿರುದ್ಧ ಹಿಂಸಾಚಾರಗಳು,ಅವರ ಆರಾಧನಾ ಸ್ಥಳಗಳ ಮೇಲೆ ದಾಳಿಗಳು ನಡೆಯುತ್ತಿವೆ.
ಮತಾಂತರ ವಿರೋಧಿ ಕಾನೂನು,ಅಂತರಧರ್ಮೀಯ ಮದುವೆಗಳಿಗೆ ಅಡ್ಡಿಗಳು, ಜೀವನೋಪಾಯಗಳಿಗೆ ನಿರಾಕರಣೆ ಇವೆಲ್ಲವನ್ನೂ ದೇಶವು ನೋಡುತ್ತಿದೆ. ಸಮಾಜದಲ್ಲಿ ಹಿಂದುಯೇತರರ ಸ್ಥಾನಮಾನಗಳನ್ನು ತಗ್ಗಿಸಲು ಇಂತಹ ಕೃತ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಇದನ್ನು ಪ್ರಶ್ನಿಸದೆ ಬೆಂಬಲಿಸುವ ಮಾಧ್ಯಮಗಳು ಮತ್ತು ಅಧಿಕಾರಯುತ ಸ್ಥಾನಗಳಲ್ಲಿರುವವರಿಂದ ಇತಿಹಾಸದ ತಿರುಚುವಿಕೆ ಕೋಮುದ್ವೇಷದ ಉನ್ಮಾದವನ್ನು ಹೆಚ್ಚಿಸುತ್ತಿವೆ ಎಂದೂ ಪತ್ರದಲ್ಲಿ ಹೇಳಲಾಗಿದೆ.







