ಇರಾನ್: ಭದ್ರತಾಧಿಕಾರಿ ಹತ್ಯೆ ಪ್ರಕರಣ; ಇಬ್ಬರು ಯುವಕರಿಗೆ ಗಲ್ಲುಶಿಕ್ಷೆ

ಟೆಹ್ರಾನ್, ಜ.7: ಇರಾನ್ ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಅರೆ ಸೇನಾಪಡೆಯ ಸದಸ್ಯನ ಹತ್ಯೆ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಶನಿವಾರ ಗಲ್ಲಿಗೇರಿಸಿರುವುದಾಗಿ ನ್ಯಾಯಾಂಗದ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ನವೆಂಬರ್ 3ರಂದು ಪ್ರತಿಭಟನೆಯ ಸಂದರ್ಭ ಅರೆಸೇನಾ ಪಡೆಯ ಯೋಧ ರುಹೊಲ್ಲ ಅಜಮಿಯಾನ್ ರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಧಾನ ಅಪರಾಧಿಗಳಾದ ಮುಹಮ್ಮದ್ ಮಹ್ದಿ ಕರಾಮಿ ಮತ್ತು ಸಯ್ಯದ್ ಮುಹಮ್ಮದ್ ಹೊಸೇನಿಯನ್ನು ಶನಿವಾರ ಬೆಳಿಗ್ಗೆ ಗಲ್ಲಿಗೇರಿಸಲಾಗಿದೆ . ಇವರಿಬ್ಬರಿಗೆ ಕೆಳಹಂತದ ನ್ಯಾಯಾಲಯ ಡಿಸೆಂಬರ್ನಲ್ಲಿ ವಿಧಿಸಿದ್ದ ಜೈಲುಶಿಕ್ಷೆಯನ್ನು ಮಂಗಳವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದು ನ್ಯಾಯಾಂಗದ ಸುದ್ಧಿಸಂಸ್ಥೆ ಮಿಝಾನ್ ವರದಿ ಮಾಡಿದೆ.
ಸೆಪ್ಟಂಬರ್ ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ದೇಶದಾದ್ಯಂತ ಭುಗಿಲೆದ್ದಂದಿನಿಂದ ಇರಾನ್ ನ ನ್ಯಾಯಾಲಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 14 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದರಲ್ಲಿ 4 ಮಂದಿಯನ್ನು ಗಲ್ಲಿಗೇರಿಸಲಾಗಿದ್ದರೆ, ಇಬ್ಬರ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. 6 ಮಂದಿ ಸಲ್ಲಿಸಿರುವ ಮೇಲ್ಮನವಿಯ ತೀರ್ಪು ಇನ್ನೂ ಹೊರಬಿದ್ದಿಲ್ಲ. ಇಬ್ಬರು ಇನ್ನೂ ಅಪೀಲು ಸಲ್ಲಿಸಲು ಬಾಕಿಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.