ಸುಲ್ತಾನ್ ಪುರಿ ಯುವತಿ ಸಾವಿನ ಪ್ರಕರಣದ ಪ್ರತ್ಯಕ್ಷದರ್ಶಿ ನಿಧಿ ಮಾದಕದ್ರವ್ಯ ಪ್ರಕರಣದಲ್ಲಿ ಬಂಧಿತಳಾಗಿದ್ದಳು

ಹೊಸದಿಲ್ಲಿ,ಜ.7: ಹೊಸ ವರ್ಷಾರಂಭದಂದು ಹೊಸದಿಲ್ಲಿಯ ಸುಲ್ತಾನ್ ಪುರಿ ಪ್ರದೇಶದಲ್ಲಿ ಕಾರು ಡಿಕ್ಕಿ ಹೊಡೆದು ಯುವತಿ ಸಾವನ್ನಪ್ಪಿದ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿರುವ ನಿಧಿ ಈ ಹಿಂದೆ ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿದ್ದಳು ಹಾಗೂ ಆಕೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಳು ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.ಅವಘಡ ನಡೆದ ಸಂದರ್ಭ ಮೃತ ಯುವತಿ ಅಂಜಲಿಸಿಂಗ್ ಚಲಾಯಿಸುತ್ತಿದ್ದ ಸ್ಕೂಟರ್ ನ ಹಿಂಬದಿ ಸವಾರಳಾಗಿದ್ದಳು.
ಸುಲ್ತಾನ್ ಪುರಿಯ ಕಾಂಜಾವಾಲಾ ಪ್ರದೇಶದಲ್ಲಿ ಜನವರಿ 1ರ ನಸುಕಿನಲ್ಲಿ ಅಂಜಲಿಸಿಂಗ್ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಪಾನಮತ್ತ ಯುವಕರಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು. ಅವಘಡದ ತೀವ್ರತೆಯಿಂದಾಗಿ ಕಾರು ಅಂಜಲಿಯನ್ನು 12 ಕಿ.ಮೀ.ವರೆಗೆ ಎಳೆದುಕೊಂಡೇ ಹೋಗಿದ್ದು, ಆಕೆ ದಾರುಣವಾಗಿ ಸಾವನ್ನಪ್ಪಿದ್ದಳು. ಈ ಸ್ಕೂಟರ್ ನಲ್ಲಿ ಸಹಪ್ರಯಾಣಿಕೆಯಾಗಿದ್ದ ನಿಧಿ, ಅಪಘಾತದ ಬಳಿಕ ಬಯಭೀತಳಾಗಿ ಸ್ಥಳದಿಂದ ಓಡಿಹೋಗಿದ್ದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಳು.
ತೆಲಂಗಾಣದಿಂದ ಗಾಂಜಾವನ್ನು ತಂದಿದ್ದಕ್ಕಾಗಿ ನಿಧಿಯನ್ನು 2020ರ ಡಿಸೆಂಬರ್ ನಲ್ಲಿ ಆಗ್ರಾದ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಕೆಯ ವಿರುದ್ಧ ಆಗ್ರಾ ಕಂಟೊನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಮಾದಕದ್ರವ್ಯ ಹಾಗೂ ಚಿತ್ತಭ್ರಮಣೆ ಪದಾರ್ಥಗಳ ಕಾಯ್ದೆ (1985) ಯಡಿ ಪ್ರಕರಣ ದಾಖಲಿಸಲಾಗಿತ್ತು. ನಿಧಿ ಜೊತೆ ಸಮೀರ್ ಹಾಗೂ ರವಿ ಎಂಬ ಇಬ್ಬರು ಯುವಕರನ್ನು ಕೂಡಾ ಬಂಧಿಸಲಾಗಿತ್ತೆಂದು ದಿಲ್ಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸುಲ್ತಾನ್ಪುರಿ ಪ್ರದೇಶದಲ್ಲಿ ಸಂಭವಿಸಿದ ಅಂಜಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಿಧಿಯನ್ನು ಬಂಧಿಸಲಾಗಿದೆಯೆಂದ ವರದಿಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಕೆಯನ್ನು ಕರೆಸಿಕೊಳ್ಳಲಾಗಿತ್ತೆಂದು ಅವರು ಹೇಳಿದ್ದಾರೆ.
ಅಂಜಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ ಹಾಗೂ ಓರ್ವ ಶರಣಾಗತನಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಹಾಗೂ ಮನೋಜ್ ಮಿತ್ತಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಅಶುತೋಷ್ ಹಾಗೂ ಅಂಕುಶ್ ಖನ್ನಾ ಎಂಬವರನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.







