ಅಮೆರಿಕ: ಶಿಕ್ಷಕಿಯ ಮೇಲೆ ಗುಂಡು ಹಾರಿಸಿದ 6 ವರ್ಷದ ಬಾಲಕ

ವಾಷಿಂಗ್ಟನ್, ಜ.7: ಪೂರ್ವ ಅಮೆರಿಕದ ವರ್ಜೀನಿಯಾ ರಾಜ್ಯದ ಪ್ರಾಥಮಿಕ ಶಾಲಾ ಬಾಲಕನೊಬ್ಬ ಶಿಕ್ಷಕಿಯ ಮೇಲೆ ಗುಂಡು ಹಾರಿಸಿದ್ದು, ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇದು ಖಂಡಿತಾ ಆಕಸ್ಮಿಕ ಘಟನೆಯಲ್ಲ. ಶಿಕ್ಷಕಿಯ ಮೇಲೆ ಬಾಲಕ ಉದ್ದೇಶಪೂರ್ವಕ ಗುಂಡು ಹಾರಿಸಿದ್ದಾನೆ. ಶಿಕ್ಷಕಿಯನ್ನು ಹೊರತುಪಡಿಸಿ ಇತರ ಯಾರೂ ಗಾಯಗೊಂಡಿಲ್ಲ.
ರಿಚ್ನೆಕ್ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಘಟನೆಯಲ್ಲಿ ಗುಂಡು ಹಾರಿಸಿದ ಬಾಲಕನನ್ನು ಕಸ್ಟಡಿಗೆ ಪಡೆದಿದ್ದೇವೆ. ಶಿಕ್ಷಕಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಳೆಯರ ಕೈಗೆ ಪಿಸ್ತೂಲ್ ದೊರಕದಂತೆ ಹೆತ್ತವರು ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರಿವ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಅಮೆರಿಕದಲ್ಲಿ ಗುಂಡಿನ ದಾಳಿಯ ಪ್ರಕರಣಗಳು ಹೆಚ್ಚಿದ್ದು ಕಳೆದ ವರ್ಷ ಗುಂಡೇಟಿಗೆ ಸಂಬಂಧಿಸಿದ ಸುಮಾರು 44,000 ಹತ್ಯೆ ಪ್ರಕರಣ ವರದಿಯಾಗಿದೆ ಎಂದು ಬಂದೂಕಿಗೆ ಸಂಬಂಧಿಸಿದ ಹಿಂಸಾಚಾರ ದಾಖಲೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Next Story