3ನೇ ಟ್ವೆಂಟಿ-20: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

ರಾಜ್‌ಕೋಟ್, ಜ.7: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ 3ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 91 ರನ್‌ನಿಂದ ಜಯಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಗೆಲ್ಲಲು 229 ರನ್ ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 16.4 ಓವರ್‌ಗಳಲ್ಲಿ 137 ರನ್‌ಗೆ ಆಲೌಟಾಯಿತು. ಲಂಕೆಯ ಪರ ಕುಶಾಲ್ ಮೆಂಡಿಸ್(23 ರನ್)ಹಾಗೂ ದಸುನ್ ಶನಕ(23 ರನ್) ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು.
ಭಾರತದ ಪರ ಅರ್ಷದೀಪ್ ಸಿಂಗ್(3-20) ಯಶಸ್ವಿ ಪ್ರದರ್ಶನ ನೀಡಿದರೆ, ಹಾರ್ದಿಕ್ ಪಾಂಡ್ಯ(2-30),ಯಜುವೇಂದ್ರ ಚಹಾಲ್(2-30) ಹಾಗೂ ಉಮ್ರಾನ್ ಮಲಿಕ್(2-31) ತಲಾ 2 ವಿಕೆಟ್‌ಗಳನ್ನು ಕಬಳಿಸಿದರು. ಅಕ್ಷರ್ ಪಟೇಲ್ (1-19) ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಸೂರ್ಯಕುಮಾರ್ ಯಾದವ್ (ಔಟಾಗದೆ 112 ರನ್, 51 ಎಸೆತ, 7 ಬೌಂಡರಿ, 9 ಸಿಕ್ಸರ್)ಸಿಡಿಸಿದ ಸೊಗಸಾದ ಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು.
ಭಾರತದ ಪರ ಆರಂಭಿಕ ಬ್ಯಾಟರ್ ಶುಭಮನ್ ಗಿಲ್(46 ರನ್, 36 ಎಸೆತ),ರಾಹುಲ್ ತ್ರಿಪಾಠಿ(35 ರನ್, 16 ಎಸೆತ) ಹಾಗೂ ಅಕ್ಷರ್ ಪಟೇಲ್(ಔಟಾಗದೆ 21 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
*ಭಾರತದ ಪರ 2ನೇ ವೇಗದ ಶತಕ
ಕೇವಲ 45 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ ಯಾದವ್ ಭಾರತದ ಪರ ವೇಗವಾಗಿ ಟಿ-20 ಶತಕ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. 2017ರಲ್ಲಿ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶ್ರೀಲಂಕಾ ವಿರುದ್ಧವೇ ಈ ಸಾಧನೆ ಮಾಡಿದ್ದರು. ಯಾದವ್ ಟಿ-20ಯಲ್ಲಿ ಮೂರನೇ ಶತಕ ಸಿಡಿಸಿದರು. 2022ರಲ್ಲಿ ಅವರು ನ್ಯೂಝಿಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ-20ಯಲ್ಲಿ ಶತಕ ಸಿಡಿಸಿದ್ದರು. ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಬಳಿಕ 3 ವಿವಿಧ ತಂಡಗಳ ವಿರುದ್ಧ ಶತಕ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡರು.