ಉಡುಪಿ: ಅಖಿಲ ಭಾರತ ವಿವಿ ಪುರುಷರ ವಾಲಿಬಾಲ್ ಪಂದ್ಯಾಟ: ಕಲ್ಲಿಕೋಟೆ, ಕುರುಕ್ಷೇತ್ರ,ಎಸ್‌ಆರ್‌ಎಂ ವಿವಿ ಸೆಮಿಫೈನಲ್ ಗೆ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜು ಅಂಗಣದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್‌ನ ಮೂರು ಪಂದ್ಯಗಳು ನಿರೀಕ್ಷೆಯ ಫಲಿತಾಂಶ ನೀಡಿದ್ದು, ಹಾಲಿ ಚಾಂಪಿಯನ್ ಕಲ್ಲಿಕೋಟೆ ವಿವಿ, ರನ್ನರ್ ಅಪ್ ಹರಿಯಾಣದ ಕುರುಕ್ಷೇತ್ರ ವಿವಿ ಹಾಗೂ ಚೆನ್ನೈನ ಬಲಿಷ್ಠ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ತಂಡಗಳು ನಾಳೆ ಸೆಮಿಫೈನಲ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡವು.
ಈ ಮೂರು ತಂಡಗಳು ತಮ್ಮ ತಮ್ಮ ಗುಂಪಿನಲ್ಲಿ ಅಗ್ರಸ್ಥಾವನ್ನು ಪಡೆದಿದ್ದು, ಎದುರಾಳಿ ಎರಡನೇ ಸ್ಥಾನಿ ತಂಡಗಳನ್ನು ಸುಲಭವಾಗಿ ಹಿಮ್ಮೆಟ್ಟಿಸಿದವು. ದಿನದ ಕೊನೆಯ ಪಂದ್ಯದಲ್ಲಿ ಸಿ ಗುಂಪಿನ ಅಗ್ರಸ್ಥಾನಿ ಆತಿಥೇಯ ಮಂಗಳೂರು ವಿವಿ, ಚೆನ್ನೈನ ಮದ್ರಾಸು ವಿವಿಯನ್ನು ಎದುರಿಸಿ ಆಡುತ್ತಿದೆ.
ಡಿ ಗುಂಪಿನ ಅಗ್ರಸ್ಥಾನಿ ಕಲ್ಲಿಕೋಟೆ ವಿವಿ, ತನ್ನ ಎದುರಾಳಿ ಬಿ ಗುಂಪಿನ ದ್ವಿತೀಯ ಸ್ಥಾನಿ ವಾರಾಣಸಿಯ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠವನ್ನು 3-1ರ ಅಂತರದಿಂದ ಹಿಮ್ಮೆಟ್ಟಿಸಿತು. ಕಲ್ಲಿಕೋಟೆ ತಂಡ ಪಂದ್ಯವನ್ನು 25-18, 25-20, 23-25 ಹಾಗೂ 25-23ರ ಅಂತರದ ಜಯ ದಾಖಲಿಸಿತು.
ಮೊದಲೆರಡು ಸೆಟ್‌ಗಳನ್ನು ಕಲ್ಲಿಕೋಟೆ ವಿವಿ ಸುಲಭವಾಗಿ ಜಯಸಿತ್ತು. ಆದರೆ ಮೂರನೇ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಒಡ್ಡಿದ ವಾರಾಣಸಿ ತಂಡ, 25-23ರ ಅಂತರದಿಂದ ಅದನ್ನು ಗೆದ್ದುಕೊಂಡಿತು. ನಾಲ್ಕನೇ ಸೆಟ್‌ನಲ್ಲೂ ತೀವ್ರ ಪೈಪೋಟಿ ಕಂಡುಬಂದಿದ್ದು ಅಂತಿಮವಾಗಿ ಕೇರಳ ತಂಡ 25-23ರ ಅಂತರದಿಂದ ಅದನ್ನು ವಶಪಡಿಸಿಕೊಂಡು ಪ್ರಶಸ್ತಿ ಉಳಿಸಿಕೊಳ್ಳುವ ಅವಕಾಶ ವನ್ನು ಜೀವಂತವಿರಿಸಿತು.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಕಳೆದ ಬಾರಿಯ ರನ್ನರ್ ಅಪ್ ಕುರುಕ್ಷೇತ್ರ ವಿವಿ, ಇಂದು ಸಹ ಸಿ ಗುಂಪಿನ ರನ್ನರ್‌ಅಪ್ ಪುಣೆಯ ಭಾರತಿ ವಿದ್ಯಾಪೀಠವನ್ನು 3-0 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿತು. ಕುರುಕ್ಷೇತ್ರ ಪಂದ್ಯವನ್ನು 25-23, 25-21, 25-14ರ ಅಂತರದಿಂದ ಏಕಪಕ್ಷೀಯ ರೀತಿಯಲ್ಲಿ ಗೆದ್ದುಕೊಂಡಿತು.
ದಿನದ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ವಲಯದ ಚಾಂಪಿಯನ್ ತಂಡವಾಗಿ ಇಲ್ಲಿಗೆ ಬಂದಿರುವ ಬಿ ಗುಂಪಿನ ಅಗ್ರಸ್ಥಾನಿ ಎಸ್‌ಆರ್‌ಎಂ ವಿವಿ, ಡಿ ಗುಂಪಿನ ಎರಡನೇ ಸ್ಥಾನಿ ತಂಡ ಔರಂಗಬಾದ್‌ನ ಡಾ.ಬಿ.ಎ.ಎಂ. ವಿವಿಯನ್ನು 3-0 ನೇರ ಸೆಟ್‌ಗಳಲ್ಲಿ ಸೋಲಿಸಿತು.
ಪಂದ್ಯದ ಎರಡನೇ ಸೆಟ್ ಅತ್ಯಂತ ರೋಚಕವಾಗಿತ್ತು. ಸೆಟ್‌ನ್ನು ವಶಪಡಿಸಿ ಕೊಳ್ಳಲು ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೂ ಕೊನೆಗೂ ಸೆಟ್‌ನ್ನು 35-33ರಿಂದ ಚೆನ್ನೈ ತಂಡ, ಕ್ವಾರ್ಟರ್ ಫೈನಲ್‌ನ್ನು 25-17, 35-33, 25-14ರಿಂದ ಜಯಿಸಿ ಅಂತಿಮ ನಾಲ್ಕರ ಹಂತವನ್ನು ಪ್ರವೇಶಿಸಿತು.
ನಾಳೆ ಬೆಳಗ್ಗೆ ನಡೆಯುವ ಸೆಮಿಪೈನಲ್‌ನಲ್ಲಿ ಕಲ್ಲಿಕೋಟೆ ವಿವಿ, ಕುರುಕ್ಷೇತ್ರ ವಿವಿಯನ್ನು ಎದುರಿಸಲಿದೆ. ಇದು ಕಳೆದ ಬಾರಿಯ ಫೈನಲ್‌ನ ಮರುಪಂದ್ಯ ವೆನಿಸಿಕೊಳ್ಳಲಿದೆ. ಎರಡನೇ ಸೆಮಿಫೈನಲ್‌ನಲ್ಲಿ ಎಸ್‌ಆರ್‌ಎಂ ವಿವಿ, ಮಂಗಳೂರು-ಮದ್ರಾಸು ವಿವಿ ಪಂದ್ಯದ ವಿಜೇತರನ್ನು ಎದುರಿಸಿ ಆಡಲಿದೆ.
ನಾಳೆ ಅಪರಾಹ್ನ 2:00ಗಂಟೆಗೆ ಸೆಮಿಫೈನಲ್‌ನಲ್ಲಿ ಸೋತವರ ನಡುವೆ ಮೂರನೇ ಸ್ಥಾನಕ್ಕೆ ಸೆಣಸಾಟ ನಡೆದರೆ, ವಿಜಯಿ ತಂಡಗಳು ಸಂಜೆ 4:00 ಗಂಟೆಗೆ ಚಾಂಪಿಯನ್ ವಿವಿ ಪ್ರಶಸ್ತಿಗಾಗಿ ಫೈನಲ್‌ನಲ್ಲಿ ಹೋರಾಡಲಿವೆ. ಪಂದ್ಯದ ಮುಗಿದ ಬಳಿಕ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.




