ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರವರ್ಧಮಾನದ ಬಗ್ಗೆ ಗಮನ: ಅಮೆರಿಕ ಸ್ಪೀಕರ್

ವಾಷಿಂಗ್ಟನ್, ಜ.7: ಅತ್ಯಂತ ನಿಕಟ ಸ್ಪರ್ಧೆಯಲ್ಲಿ ಹಕೀಂ ಸೆಕಾವ್ ಝೆಪ್ರೀಸ್ರನ್ನು 4 ಮತಗಳ ಅಂತರದಿಂದ ಸೋಲಿಸಿದ ಕೆವಿನ್ ಮೆಕಾರ್ಥಿ ಅಮೆರಿಕ ಸಂಸತ್ತಿನ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ನ್ಯಾನ್ಸಿ ಪೆಲೋಸಿ ಸ್ಥಾನಕ್ಕೆ ಆಯ್ಕೆಯಾಗಿರುವ ಮೆಕಾರ್ಥಿ, ಸಂಸತ್ತನ್ನು ಉದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ಸಾರ್ವಜನಿಕ ಸಾಲದ ಸಮಸ್ಯೆಯ ಬಗ್ಗೆ ಗಮನ ಹರಿಸಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಚೀನಾದ ಎದುರಿನ ಆರ್ಥಿಕ ಪೈಪೋಟಿಯಲ್ಲಿ ತಮ್ಮ ದೇಶಕ್ಕೆ ಮೇಲುಗೈ ಆಗಬೇಕು ಎಂಬುದು ತನ್ನ ಹೆಬ್ಬಯಕೆಯಾಗಿದೆ. ಅಮೆರಿಕಕ್ಕೆ ಎದುರಾಗಿರುವ ದೀರ್ಘಾವಧಿಯ ಸಮಸ್ಯೆಯ ಬಗ್ಗೆ ನಾವು ಪರಿಶೀಲಿಸಲಿದ್ದು ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರವರ್ಧಮಾನದ ವಿಷಯದ ಬಗ್ಗೆ ಸಂಸತ್ತು ಗಮನ ಹರಿಸಲಿದೆ . ಈ ವಿಷಯದಲ್ಲಿ ಸಂಸತ್ತು ಒಮ್ಮತದ ನಿಲುವು ತಳೆಯಬೇಕಿದೆ ಎಂದವರು ಹೇಳಿದ್ದಾರೆ.
ಚೀನಾ ಕಮ್ಯುನಿಸ್ಟ್ ಪಕ್ಷದ ವಿಷಯಕ್ಕೆ ಸಂಬಂಧಿಸಿ ದ್ವಿಪಕ್ಷೀಯ ಸಮಿತಿಯನ್ನು ನಾವು ರಚಿಸಲಿದ್ದು, ಚೀನಾಕ್ಕೆ ಹೋದ ಸಾವಿರಾರು ಉದ್ಯೋಗಗಳನ್ನು ಮರಳಿ ತರುವ ಬಗ್ಗೆ ಈ ಸಮಿತಿ ಪರಿಶೀಲಿಸಲಿದೆ. ಆಗ ನಾವು ಈ ಆರ್ಥಿಕ ಪೈಪೋಟಿಯಲ್ಲಿ ಗೆಲ್ಲಲಿದ್ದೇವೆ. ಯಾವುದೇ ಕೆಲಸ ಆರಂಭಿಸುವುದು ಮುಖ್ಯವಲ್ಲ, ಅದನ್ನು ಎಷ್ಟು ಉತ್ತಮವಾಗಿ, ಬಲಿಷ್ಟವಾಗಿ ಮುಗಿಸುತ್ತೇವೆ ಎಂಬುದು ಮುಖ್ಯ ಎಂದು ಮೆಕಾರ್ಥಿ ಹೇಳಿದರು.