ಮ್ಯಾನ್ಮಾರ್ ಜೈಲಿನಲ್ಲಿ ಗಲಭೆ: ಓರ್ವ ಕೈದಿ ಮೃತ್ಯು; 60ಕ್ಕೂ ಅಧಿಕ ಮಂದಿಗೆ ಗಾಯ

ಯಾಂಗಾನ್, ಜ.7: ಮ್ಯಾನ್ಮಾರ್ ಜೈಲಿನಲ್ಲಿ ಸಂಭವಿಸಿದ ಗಲಭೆಯಲ್ಲಿ ಓರ್ವ ಕೈದಿ ಮೃತಪಟ್ಟಿದ್ದು 60ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಸೇನಾಡಳಿತದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ರಾಜಧಾನಿ ಯಾಂಗಾನ್ನ ಪಶ್ಚಿಮದಲ್ಲಿರುವ ಪಥೇರಿನ್ ನಗರದ ಜೈಲಿನಲ್ಲಿ ಗಲಭೆ ಸಂಭವಿಸಿದೆ. ಕೈದಿಯೊಬ್ಬನ ಬಳಿಯಿದ್ದ ಮೊಬೈಲ್ ಫೋನನ್ನು ವಶಕ್ಕೆ ಪಡೆದ ಜೈಲು ಅಧಿಕಾರಿ ಆತನ ವಿರುದ್ಧ ಶಿಸ್ತುಕ್ರಮ ಕೈಗೊಂಡದ್ದನ್ನು ವಿರೋಧಿಸಿ ಸಹ ಕೈದಿಗಳು ಘರ್ಷಣೆಗೆ ಇಳಿದರು. ಆರಂಭದಲ್ಲಿ ಒಂದು ಕೊಠಡಿಗೆ ಸೀಮಿತವಾಗಿದ್ದ ಗಲಭೆಗೆ ಜೈಲಿನ ಇತರ ಕೈದಿಗಳೂ ಕೈಜೋಡಿಸಿದಾಗ ಹಿಂಸಾಚಾರ ಭುಗಿಲೆದ್ದಿದೆ.
ಜೈಲು ಕೊಠಡಿಯ ಬಾಗಿಲನ್ನು ಮುರಿದು ಹೊರನುಗ್ಗಿದ ಸುಮಾರು 70ರಷ್ಟು ಕೈದಿಗಳು ಕಲ್ಲು, ಕಟ್ಟಿಗೆ, ಸಿಮೆಂಟ್ ತುಂಡಿನಿಂದ ಜೈಲು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು. ಅವರನ್ನು ನಿಯಂತ್ರಿಸಲು ವಿಫಲವಾದ ಬಳಿಕ ಅಧಿಕಾರಿಗಳು ಗುಂಡು ಹಾರಿಸಿದ್ದು, ಓರ್ವ ಕೈದಿ ಮೃತಪಟ್ಟು, ಇಬ್ಬರು ಪೊಲೀಸರು, 9 ಭದ್ರತಾ ಸಿಬಂದಿ ಸಹಿತ 70 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.