ಮಹಿಳಾ ಶಿಕ್ಷಣದ ಮೇಲಿನ ನಿಷೇಧ ತೆರವು: ತಾಲಿಬಾನ್ ಗೆ ವಿಶ್ವಸಂಸ್ಥೆ ಆಗ್ರಹ

ಕಾಬೂಲ್, ಜ.7: ಮಹಿಳಾ ಶಿಕ್ಷಣದ ಮೇಲಿನ ನಿಷೇಧವನ್ನು ತುರ್ತಾಗಿ ತೆಗೆದುಹಾಕುವಂತೆ ಮತ್ತು ನೆರವು ಒದಗಿಸುವ ಸಂಸ್ಥೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ತಾಲಿಬಾನ್ ಆಡಳಿತವನ್ನು ವಿಶ್ವಸಂಸ್ಥೆ ಆಗ್ರಹಿಸಿದೆ.
ತಾಲಿಬಾನ್ ನೇಮಿಸಿದ ಶಿಕ್ಷಣ ಸಚಿವ ಮುಹಮ್ಮದ್ ನದೀಮ್ರನ್ನು ಶನಿವಾರ ಕಾಬೂಲ್ನಲ್ಲಿ ಭೇಟಿಯಾದ ವಿಶ್ವಸಂಸ್ಥೆಯ ಉನ್ನತ ರಾಜತಾಂತ್ರಿಕ ಅಧಿಕಾರಿ ಪೊಝೆಲ್ ಮಾರ್ಕಸ್ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ‘ಅಫ್ಘಾನಿಸ್ತಾನವು ಬಿಕ್ಕಟ್ಟಿನ ಹೊಸ ಯುಗಕ್ಕೆ ಪ್ರವೇಶಿಸುತ್ತಿದೆ. ಮಹಿಳೆಯರ ಶಿಕ್ಷಣಕ್ಕೆ ನಿಷೇಧ ಮತ್ತು ನೆರವು ಒದಗಿಸುವ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅವಕಾಶ ನಿರಾಕರಣೆಯಿಂದ ಅಫ್ಘಾನ್ಗೆ ಹಾನಿಯಾಗಲಿದ್ದು ಇದನ್ನು ತುರ್ತಾಗಿ ತೆರವುಗೊಳಿಸಬೇಕು ಎಂಬ ಅಂಶವನ್ನು ತಾಲಿಬಾನ್ ಆಡಳಿತದ ಉನ್ನತ ಶಿಕ್ಷಣ ಸಚಿವ ನದೀಮ್ ಜತೆಗಿನ ಭೇಟಿಯ ಸಂದರ್ಭ ವಿಶ್ವಸಂಸ್ಥೆಯ ಪ್ರತಿನಿಧಿ ಪೊಝೆಲ್ ಮಾರ್ಕಸ್ ಸ್ಪಷ್ಟಪಡಿಸಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆ ನೆರವು ಯೋಜನೆಯ ಕಚೇರಿ ಟ್ವೀಟ್ ಮಾಡಿದೆ.
2021ರ ಆಗಸ್ಟ್ ನಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿದ್ದ ತಾಲಿಬಾನ್ ಮೂಲಭೂತ ಹಕ್ಕುಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು, ತೀವ್ರವಾಗಿ ನಿರ್ಬಂಧಿಸುವ ಹಲವು ಕಾರ್ಯನೀತಿಗಳನ್ನು ಹೇರಿತ್ತು. ಕಳೆದ ತಿಂಗಳು ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ನಿಷೇಧ ಮತ್ತು ಮಾನವೀಯ ನೆರವು ಒದಗಿಸುವ ಎನ್ಜಿಒಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುವುದಕ್ಕೆ ನಿಷೇಧ ವಿಧಿಸಿದೆ. ಈ ಕ್ರಮಗಳು ದುರ್ಬಲ ವರ್ಗದವರು, ಮಹಿಳೆಯರು, ಮಕ್ಕಳು ಮತ್ತು ಇಡೀ ದೇಶಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಮಾನವ ಹಕ್ಕುಗಳ ತಜ್ಞರು ಮತ್ತು ಅಂತರಾಷ್ಟ್ರೀಯ ಸಮುದಾಯದ ಸದಸ್ಯರು ಖಂಡಿಸಿದ್ದಾರೆ.
ತಾಲಿಬಾನ್ ಆಡಳಿತ ಮಹಿಳೆಯರು ಮತ್ತು ಮಕ್ಕಳಿಗೆ ವಿವಿ ಶಿಕ್ಷಣಕ್ಕೆ ಪ್ರವೇಶಾವಕಾಶ ನಿಷೇಧಿಸಿರುವ ವರದಿ ಆಘಾತಕಾರಿಯಾಗಿದೆ ಎಂದು ಡಿಸೆಂಬರ್ ಅಂತ್ಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿತ್ತು. ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯದ ಗೌರವವನ್ನು ಕಡೆಗಣಿಸುವ ಈ ನೀತಿ ಹಾಗೂ ಪದ್ಧತಿಗಳನ್ನು ತಕ್ಷಣ ರದ್ದುಗೊಳಿಸುವಂತೆ ಭದ್ರತಾ ಮಂಡಳಿ ತಾಲಿಬಾನ್ ಆಡಳಿತಕ್ಕೆ ಕರೆ ನೀಡಿತ್ತು.
ನೆರವು ಒದಗಿಸುವ ಅಂತರಾಷ್ಟ್ರೀಯ ಸಂಘಟನೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ನಿಷೇಧಿಸಿದರೆ, ದೇಶದಲ್ಲಿ ನಡೆಯುತ್ತಿರುವ ಮಾನವೀಯ ಉಪಕ್ರಮಗಳ ಮೇಲೆ ಗಮನಾರ್ಹ ಮತ್ತು ತಕ್ಷಣದ ಪರಿಣಾಮ ಬೀರಲಿದೆ. ಈ ಕ್ರಮಗಳು ತಾಲಿಬಾನ್ ಆಡಳಿತ ದೇಶದ ಜನರಿಗೆ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ನೀಡಿದ್ದ ವಾಗ್ದಾನ ಮತ್ತು ಬದ್ಧತೆಗೆ ವಿರುದ್ಧವಾಗಿದೆ ಎಂದು ಭದ್ರತಾ ಮಂಡಳಿಯ ಸದಸ್ಯರು ಹೇಳಿದ್ದರು.