ಸೇವೆ ವ್ಯತ್ಯಯ ಹಿನ್ನೆಲೆ: ಗ್ರಾಹಕರಿಗೆ 3 ಸಾವಿರ ರೂ.ಪರಿಹಾರ ನೀಡಲು ಕೋರ್ಟ್ ಆದೇಶ

ಬೆಂಗಳೂರು: ನಿಗದಿತ ವೇಳೆಗೆ ಊಟವನ್ನು ತಲುಪಿಸದ ಝೊಮೋಟೋ ಕಂಪೆನಿ ಊಟಕ್ಕಾಗಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ 3 ಸಾವಿರ ರೂ.ಗಳ ಪರಿಹಾರ ನೀಡುವಂತೆ ನಗರದ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
2022ರ ಎಪ್ರಿಲ್ 14ರಂದು ಗ್ರಾಹಕ ಅಭಿಷೇಕ್ ಎನ್ನುವವರು ರಾತ್ರಿ ಊಟಕ್ಕಾಗಿ ಝೊಮೋಟೋ ಕಂಪೆನಿಗೆ ಆರ್ಡರ್ ಮಾಡಿದ್ದರು. ಬೆಂಗಳೂರು ನಗರದ ರಾಜಾಜಿನಗರದಲ್ಲಿರುವ ಜೋಮೋಟೋ ಹೋಟೆಲ್‍ನಲ್ಲಿ 256 ರೂಗಳನ್ನು ಪಾವತಿಸಿ ರಾತ್ರಿ 8.46ರಲ್ಲಿ ಆರ್ಡರ್ ಮಾಡಿದ್ದರು. ಆದರೆ ರಾತ್ರಿ 9.45 ಸಮಯವಾದರೂ ಸಹ ಅವರಿಗೆ ರಾತ್ರಿ ಊಟವನ್ನು ಝೊಮೋಟೋ ಕಂಪೆನಿಯಿಂದ ತಲುಪಿಸಿರಲಿಲ್ಲ.
ಇದರಿಂದ ಬೇಸತ್ತ ಅವರು ತಾವು ಮಾಡಿದ ಊಟಕ್ಕಾಗಿ ಮಾಡಿದ ಆರ್ಡರ್ ಅನ್ನು ರದ್ದುಪಡಿಸಿದರು. ತಕ್ಷಣ ಝೊಮೋಟೋ ಕಂಪೆನಿ ಅವರು ಪಾವತಿಸಿದ್ದ ಹಣವನ್ನು ವಾಪಾಸ್ ಅವರಿಗೆ ಪಾವತಿಸಿತ್ತು. ಇದರಿಂದ ಸಮಾಧಾನಗೊಳ್ಳದ ಗ್ರಾಹಕ ತಮಗಾಗಿರುವ ಮಾನಸಿಕ ಕಿರುಕುಳಕ್ಕೆ 1 ಲಕ್ಷ ಪರಿಹಾರ ನೀಡುವಂತೆ ಕೋರಿ ಎಪ್ರಿಲ್ ತಿಂಗಳ ಕೊನೆಯಲ್ಲಿ ಶಾಂತಿನಗರದಲ್ಲಿರುವ ಗ್ರಾಹಕ ನ್ಯಾಯಾಲಯದಲ್ಲಿ ಝೊಮೋಟೋ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿದ್ದರು ಹಾಗೂ ಕೇಸ್‍ಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಗ್ರಾಹಕ ನ್ಯಾಯಾಲಯಕ್ಕೆ ಒದಗಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಝೊಮೋಟೋ ಕಂಪೆನಿಯ ಸೇವೆಯಲ್ಲಿನ ನ್ಯೂನತೆ ಸಾಬೀತಾದ ಹಿನ್ನೆಲೆ ಊಟ ಆದೇಶಿಸಿದ್ದ ಗ್ರಾಹಕ ಅಭಿಷೇಕ್ ಅವರಿಗೆ 3 ಸಾವಿರ ರೂ. ಪರಿಹಾರ ಒದಗಿಸುವಂತೆ ಸೂಚಿಸಿದೆ. ಇದರಲ್ಲಿ 2 ಸಾವಿರ ರೂ.ಗಳು ಅಭಿಷೇಕ್ ಅವರಿಗೆ ಪರಿಹಾರ ರೂಪದಲ್ಲಿ ನೀಡಬೇಕು ಹಾಗೂ ಉಳಿದ 1 ಸಾವಿರ ರೂ.ಗಳನ್ನು ನ್ಯಾಯಾಲಯದ ವೆಚ್ಚವನ್ನಾಗಿ ಭರಿಸಬೇಕೆಂದು ತೀರ್ಪು ನೀಡಿದೆ.







