ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್‍ನಿಂದ ಕೊಡುಗೆ: ರಾಮಲಿಂಗಾರೆಡ್ಡಿ
ಬಿಟಿಎಂ ಬಡಾವಣೆಯಲ್ಲಿ ಉದ್ಯೋಗ ಮೇಳ

ಬೆಂಗಳೂರು: ಬಿಟಿಎಂ ಕ್ಷೇತ್ರದಲ್ಲಿ ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸುತ್ತಿದ್ದು, ಪ್ರತಿವರ್ಷ ಸಹಸ್ರಾರು ಮಂದಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಈ ಬಾರಿ 125ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ಮೇಳದಲ್ಲಿ ಭಾಗವಹಿಸಿದ್ದ ಮತ್ತಷ್ಟು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಕೆಪಿಸಿಸಿ ಕಾಯಾಧ್ಯಕ್ಷರೂ ಆಗಿರುವ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಬಿಟಿಎಂ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಉದ್ದೇಶದಿಂದ ಕೋರಮಂಗಲದ ವೇಮನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ನೆಕ್ಸ್ಸ್ ಪ್ಲೇಸ್ ಪ್ರೈವೇಟ್ ಲಿ.ನಿಂದ ಬೆಂಗಳೂರಿನ ಅತಿದೊಡ್ಡ ಉದ್ಯೋಗ ಮೇಳ ಆಯೋಜಿಸಿದ್ದು, ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ, ಹರ್ಷಿತಾ ಗೌಡ ನೇತೃತ್ವದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ‘ಕಾಂಗ್ರೆಸ್ ಆಡಳಿತದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ, ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಲಾಗಿತ್ತು. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ನೀಡಿದ ಪ್ರೋತ್ಸಾಹ, ಸಹಕಾರದಿಂದ ವಿಶ್ವದಲ್ಲಿ ನಮ್ಮ ನಗರ ಮಾಹಿತಿ ತಂತ್ರಜ್ಞಾನ ತಾಣವಾಗಿ ಖ್ಯಾತಿ ಗಳಿಸಿದೆ ಎಂದು ನುಡಿದರು.
ಲಕ್ಷಾಂತರ ಜನರಿಗೆ ಉದ್ಯೋಗ ದೊರೆತಿದ್ದು, ದೇಶದ ಜಿಡಿಪಿಗೆ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗಿದೆ. ಇದೆಲ್ಲವೂ ಕಾಂಗ್ರೆಸ್‍ನ ದೂರ ದೃಷ್ಟಿಯಿಂದ ಸಾಧ್ಯವಾಗಿದೆ. ರೋಜ್‍ಗಾರ್ ಯೋಜನೆ ಮೂಲಕ ಕೊಟ್ಯಂತರ ನಿರುದ್ಯೋಗಿ ಯುವಜನರಿಗೆ ಸುಲಭವಾಗಿ ಸಾಲ ಸೌಲಭ್ಯ ನೀಡಿದ್ದು, ಇದರಿಂದ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಮೇಳದಲ್ಲಿ ಸುಮಾರು 30 ಸಾವಿರ ಮಂದಿ ಪಾಲ್ಗೊಂಡಿದ್ದು, ಸುಮಾರು 22ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು. ಮೊದಲ ಹಂತದಲ್ಲಿ ಸುಮಾರು 11,560 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಂತಿಮವಾಗಿ ಸುಮಾರು 5,600 ಅಭ್ಯರ್ಥಿಗಳಿಗೆ ಉದ್ಯೋಗದ ಆದೇಶ ಪತ್ರ ನೀಡಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಸುತ್ತಿನಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಮೇಯರ್, ಬಿಟಿಎಂ ಕ್ಷೇತ್ರದ ಮಾಜಿ ಪಾಲಿಕೆ ಸದಸ್ಯರು, ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರುಗಳು, ಸಂಘ ಸಂಸ್ಥೆಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









