ಸಾಹಿತ್ಯ ಸಮ್ಮೇಳನ ಮಳಿಗೆಗಳಲ್ಲಿ ತಗ್ಗಿದ ದಲಿತ, ಬಂಡಾಯ ಸಾಹಿತ್ಯ!

ಹಾವೇರಿ: ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಭಾಗಗಳಲ್ಲಿ ದಲಿತ, ಮುಸ್ಲಿಮ್ ಸಮುದಾಯಗಳು ಹೆಚ್ಚಾಗಿರುವ ಹಿನ್ನೆಲೆ ಸಮ್ಮೇಳನದಲ್ಲಿ ದಲಿತ, ಬಂಡಾಯ ಸಾಹಿತ್ಯದ ಪುಸ್ತಕಗಳಿಗೆ ಬೇಡಿಕೆ ಇದೆ. ಆದರೆ, ಶೇ.10ರಷ್ಟು ಮಾತ್ರ ಪ್ರಗತಿಪರ ಪ್ರಕಾಶಕರ ಮಳಿಗೆಗಳು ಸ್ಥಾಪಿತಗೊಂಡಿದ್ದರಿಂದ ಸಾಹಿತ್ಯಾಸಕ್ತರು ನಿರಾಸೆ ಅನುಭವಿಸುವಂತಾಗಿದೆ.
ಸಮ್ಮೇಳನದಲ್ಲಿ ಸ್ಥಾಪಿತಗೊಂಡಿದ್ದ ಸುಮಾರು 150ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಲ್ಲಿ ಕೇವಲ 10ರಿಂದ 15 ಪ್ರಗತಿಪರ ವಿಚಾರಧಾರೆಗಳ ಪುಸ್ತಕ ಮಳಿಗೆಗಳು ಕಂಡುಬಂದವು. ಲಂಕೇಶ್, ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಡಿ.ಆರ್.ನಾಗರಾಜ್, ಚಂಪಾ, ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಹಲವು ದಲಿತ, ಬಂಡಾಯ ಸಾಹಿತಿಗಳ ಪುಸ್ತಕಗಳಿಗೆ ಬೇಡಿಕೆ ಇದ್ದರೂ ಬೆರಳೆಣಿಕೆಯಷ್ಟಿದ್ದವು. ಇದಿಷ್ಟೇ ಅಲ್ಲದೆ, ಮುಸ್ಲಿಮ್ ಸಾಹಿತಿಗಳಾದ ನಿಸ್ಸಾರ್ ಅಹಮ್ಮದ್, ಸಾರಾ ಅಬೂಬಕರ್, ರಂಜಾನ್ ದರ್ಗಾ, ರಹಮತ್ ತರೀಕೆರೆ, ಇಸ್ಮಾಯಿಲ್, ಡಾ.ಕೆ.ಶರೀಫಾ, ಅಬ್ದುಲ್ ರಶೀದ್ ಸೇರಿದಂತೆ ಹಲವರ ಪುಸ್ತಕಗಳೂ ವಿರಳವಾಗಿದ್ದು, ಬಹುತೇಕ ಮಳಿಗೆಗಳಲ್ಲಿ ಬಲಪಂಥೀಯ ಸಾಹಿತಿಗಳ ಕೃತಿಗಳೇ ರಾರಾಜಿಸಿದ್ದರು.
ಆ್ಯಪ್ ಮೂಲಕ ನೋಂದಣಿ ಎಂಬ ಕಸಾಪದ ಹೊಸ ನಿಯಮ ಹಾಗೂ ತಳ ಸಮುದಾಯ ಕಡೆಗಣಿಸಿರುವ ತಾರತಮ್ಯ ನೀತಿಯಿಂದಲೇ ಪ್ರಗತಿಪರ ಪ್ರಕಾಶಕರು ಈ ಬಾರಿಯ ಸಮ್ಮೇಳನದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಹಲವರಲ್ಲಿ ಕೇಳಿಬಂದವು. ಇನ್ನು ಮಳಿಗೆಗಳತ್ತ ಪರಿಷತ್ತಿನ ಯಾವೊಬ್ಬ ಪ್ರತಿನಿಧಿಯೂ ಸುಳಿಯದಿರುವುದರಿಂದ ಮಳಿಗೆಗಳಲ್ಲಿ ಬಿದ್ದಿರುವ ಕಸದ ವಿಲೇವಾರಿಗೆ ಕ್ರಮ ಜರುಗಿಸಿಲ್ಲ.
ಮಳಿಗೆಗಳ ಮುಂದೆ ಕಸವನ್ನು ಗುಡ್ಡೆ ಹಾಕಿಕೊಂಡೇ ಪುಸ್ತಕ ಪ್ರೇಮಿಗಳನ್ನು ಆಹ್ವಾನಿಸುವಂತಾಗಿತ್ತು. ಕೊನೆಗೆ ಮಳಿಗೆಗಳ ಮಾಲಕರೆ ಕಸವನ್ನು ಹೊರಹಾಕುವ ದುಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪ್ರಕಾಶಕರು ಪ್ರತಿಕ್ರಿಯಿಸಿ ಸಮ್ಮೇಳನದ ಸಂಘಟಕರು ಪುಸ್ತಕ ಮಾರಾಟಗಾರರಿಗೆ ಬೇಕಾದ ಅಗತ್ಯತೆಗಳ ಕುರಿತು ಕೇಳುತ್ತಿಲ್ಲ. ಪ್ರತಿಸಲವೂ ಒಂದಲ್ಲ, ಒಂದು ಸಮಸ್ಯೆಯನ್ನು ಪ್ರಕಾಶಕರು ಅನುಭವಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾಷೆಯ ಬಗ್ಗೆ ಆಸಕ್ತಿ ಇರುವವರು ಅಧ್ಯಕ್ಷರಾದರೆ ಸೂಕ್ತ: ಹೊಸದಾಗಿ ತಯಾರಿ ಮಾಡಿರುವ ಪರಿಷತ್ತಿನ ಆಪ್ ಅನ್ನು ಸರಿಯಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಅಧ್ಯಕ್ಷರ ನಡವಳಿಕೆಗೆ ಬೇಸತ್ತಿರುವ ಬಹುತೇಕ ಪುಸ್ತಕ ಮಾರಾಟಗಾರರು ಬಂದಿಲ್ಲ. ಕನ್ನಡ ಭಾಷೆ, ಪುಸ್ತಕ ಮತ್ತು ಪ್ರಕಾಶನದ ಬಗ್ಗೆ ಆಸಕ್ತಿ ಇರುವವರು ಕಸಾಪ ಅಧ್ಯಕ್ಷರಾಗಬೇಕೇ ಹೊರತು ಕೆಎಎಸ್, ಐಎಎಸ್ ಅಧಿಕಾರಿಗಳಲ್ಲ. ಜೋಶಿಯವರು ಕನ್ನಡ, ಕನ್ನಡ ಎನ್ನುತ್ತಾರೆ. ಇಲ್ಲಿನ ಮಳಿಗೆಗಳಿಗೆ ಕ್ರಮಾಂಕ ಕೊಡುವಾಗ ಎ, ಬಿ, ಸಿ, ಡಿ ಅಂತ ನೀಡಿದ್ದಾರೆ. ಅದನ್ನೇ ಅ, ಆ, ಇ, ಈ ಅಂತ ಕೊಡಬಹುದಿತ್ತು.
-ರವಿಚಂದ್ರ ರಾವ್ ಸಾಧನ ಪ್ರಕಾಶನ ಬೆಂಗಳೂರು.
ಬಿಸಿಲ ಧಗೆ: ಹಾವೇರಿನಲ್ಲಿ ಬಿಸಿಲ ಧಗೆ ಹೆಚ್ಚಾಗಿಯೇ ಕಂಡು ಬಂದಿತು. ಇದರಿಂದ ಮಧ್ಯಾಹ್ನದ ವೇಳೆಗೆ ಪೆಂಡಾಲ್‍ಗಳಲ್ಲಿ ಕೂರಲು ಜನ ಪರದಾಟ ನಡೆಸಿದರು. ಧೂಳು ಎದ್ದೇಳದಂತೆ ಹಸಿರು ಕಾರ್ಪೇಟ್ ಹಾಸಿರುವುದರಿಂದ ಧೂಳಿನ ಸಮಸ್ಯೆ ತಲೆದೋರಲಿಲ್ಲ ಎನ್ನುವುದು ಖುಷಿಯ ಸಂಗತಿ.







