ಬಿಜೆಪಿಯ ಹಿರಿಯ ನಾಯಕ, ಬಂಗಾಳದ ಮಾಜಿ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ನಿಧನ

ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ Keshari Nath Tripathi ಅವರು ರವಿವಾರ ಬೆಳಗ್ಗೆ 5 ಗಂಟೆಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೂರು ಬಾರಿ ಉತ್ತರಪ್ರದೇಶ ವಿಧಾನಸಭೆಯ ಸ್ಪೀಕರ್ ಆಗಿದ್ದ ಅವರನ್ನು ಡಿಸೆಂಬರ್‌ನಲ್ಲಿ ಕೈ ಮುರಿತ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರನ್ನು ಮನೆಗೆ ಕರೆತರಲಾಯಿತು, ತಮ್ಮ ನಿವಾಸದಲ್ಲಿ ಅವರು ರವಿವಾರ ನಸುಕಿನಲ್ಲಿ ನಿಧನರಾದರು.
ತ್ರಿಪಾಠಿ ಎರಡು ಬಾರಿ ಕೋವಿಡ್ ವೈರಸ್‌ಗೆ ತುತ್ತಾಗಿದ್ದರು ಹಾಗೂ ಲಕ್ನೋದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯಲ್ಲಿ (SGPGIMS) ಸುದೀರ್ಘ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದರು.
ನವೆಂಬರ್ 10, 1934 ರಂದು ಅಲಹಾಬಾದ್‌ನಲ್ಲಿ ಜನಿಸಿದ್ದ ಕೇಸರಿ ನಾಥ್ ತ್ರಿಪಾಠಿ ಅವರು 2014ರಿಂದ 2019ರ ತನಕ ಪಶ್ಚಿಮಬಂಗಾಳದ ರಾಜ್ಯಪಾಲರಾಗಿದ್ದರು. ಬಿಹಾರ, ಮೇಘಾಲಯ ಹಾಗೂ ಮಿಝೋರಾಂ ರಾಜ್ಯಗಳ ರಾಜ್ಯಪಾಲರಾಗಿ ಅಲ್ಪಾವಧಿಗೆ ಹೆಚ್ಚುವರಿ ಹೊಣೆಯನ್ನು ಹೊಂದಿದ್ದರು. ಕವಿ, ಲೇಖಕರಾಗಿದ್ದ ಅವರು ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರೂ ಆಗಿದ್ದರು.
ಅವರು ಆರು ಬಾರಿ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು.
Prayagraj, Uttar Pradesh | Senior BJP leader and former speaker of UP Legislative Assembly Keshari Nath Tripathi passes away, confirms his son Neeraj Tripathi pic.twitter.com/9nFzsEwvuF
— ANI UP/Uttarakhand (@ANINewsUP) January 8, 2023







