ಚಿಕ್ಕಮಗಳೂರು | ವಿವಿಧ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಯ ಸೆರೆ: 20 ಲಕ್ಷ ರೂ. ಮೌಲ್ಯದ ಸೊತ್ತು ವಶ

ಚಿಕ್ಕಮಗಳೂರು, ಜ.8: ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಇಲ್ಲಿನ ನಗರ ಠಾಣೆಯ ಪೊಲೀಸರು ಆತನಿಂದ ಚಿನ್ನ, ಬೆಳ್ಳಿ ಸಹಿತ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಮೂಲದ ಹಾಲಿ ಬೆಂಗಳೂರು ನಿವಾಸಿ ಅಹ್ಮದ್ ಕಬೀರ್(36) ಬಂಧಿತ ಆರೋಪಿ. ನಗರ ಠಾಣೆಯ ಪಿಎಸ್ಸೈ ನಾಗೇಂದ್ರ ನಾಯ್ಕ ಜ.2ರಂದು ಮಧ್ಯರಾತ್ರಿ ಗಸ್ತಿನಲ್ಲಿದ್ದ ವೇಳೆ ನಗರದ ಕಲ್ಯಾಣ ನಗರ ಬಡಾವಣೆ ವ್ಯಾಪ್ತಿಯಲ್ಲಿ ಕಾರೊಂದರಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಪಿಸ್ತೂಲ್, ರಾಡ್ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ನಂತರ ಆರೋಪಿಯನ್ನು ವಶಕ್ಕೆ ಪಡದು ವಿಚಾರಣೆಗೊಳಪಡಿಸಿದಾಗ ಆತ ಸುಮಾರು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ 292 ಗ್ರಾಂ ಚಿನ್ನ ಹಾಗೂ 300 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ 1 ಕಾರು ಹಾಗೂ 2 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿ ಇತ್ತೀಚೆಗೆ ತನ್ನ ಸಹಚರರೊಂದಿಗೆ ಸೇರಿ ಬಾಳೆಹೊನ್ನರೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಿರೇಗದ್ದೆ ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡದಲ್ಲಿ ಕಳ್ಳತನ ಮಾಡಿರುವುದೂ ಬೆಳಕಿಗೆ ಬಂದಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಗರ ಠಾಣೆಯ ಪೊಲೀಸರು ಎಸ್ಪಿ, ಎಎಸ್ಪಿ ಹಾಗೂ ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಗರಠಾಣೆಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದು, ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಕೆಲಸವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.









